ಎಲ್ಲರೂ ಊರಿಗೆ ಹೋಗಿದ್ದರು, ನಾ ಇನ್ನೆರಡು ದಿನ ಮನೆಯಲ್ಲಿ ಒಂಟಿ. ಹೋಟೆಲ್ ನಲ್ಲಿ ರಾತ್ರಿ ಊಟ ಮಾಡಿದ್ದರಿಂದ ಮನೆಯಲ್ಲಿ ಮಾಡಲು ಬೇರೇನೂ ಕೆಲಸ ಇರಲಿಲ್ಲ . ಟಿ ವಿ ಹಾಕಿದೆ, ಹೊಸತೇನೂ ಕಾಣಲಿಲ. ಪುಸ್ತಕಗಳ ತಿರುವಿದೆ , ಓದಲು ಮನಸ್ಸಾಗಲಿಲ್ಲ. ಬಾಗಿಲ ಒಳ ಚಿಲಕ ಹಾಕಿದೆ, ಮಡದಿ ನೆನಪಾದಳು. ನಮ್ಮ ಮೇಸ್ತ್ರಿ ಹೇಳಿದ್ದ 'ಸಿಟಿಯಿಂದ ಬರೋವಾಗ ಹಾಗೆ ಬಾಗಿಲು ಚಿಲಕ, ಬೀಗ ಎಲ್ಲಾ ತಂದು ಬಿಡಿ ಸಾರ್' ಪೇಟೆಯಿಂದ ನಾನೇನೋ ತಂದೆ, ಆದರೆ ತುರ್ತು ಕೆಲಸದಿಂದಾಗಿ ನನಗೆ ಹೋಗಲಾಗಲಿಲ್ಲ, ಚಿಕ್ಕ ಚಿಕ್ಕ ಸಾಮಾನುಗಳನ್ನೆಲ್ಲಾ ಒಂದು ಚೀಲಕ್ಕೆ ಹಾಕಿದಾಗ ಅದು ತುಸು ಬಾರವುಳ್ಳ ದೊಡ್ಡ ಗಂಟು ಆಗಿ ಹೋಗಿತ್ತು . ನನ್ನವಳೇ ನಮ್ಮ ಪುಟ್ಟ ಕಂದಮ್ಮನನ್ನು ಎತ್ತಿಕೊಂಡು, ನಗರದ ಮದ್ಯದಲ್ಲಿದ್ದ ಮನೆಯಿಂದ, ಹೊರವಲಯದಲ್ಲಿರುವ ಈ ಮನೆಗೆ ಬಸ್ಸಿನಲ್ಲಿ ಒದ್ದಾಡಿಕೊಂಡು ತಂದಿದ್ದಳು .
ಈ ಮನೆ ಕಟ್ಟಿಸುವ ಸಮಯದಲ್ಲಿ ಪ್ರತೀ ವಾರಾಂತ್ಯವೂ ನಾನು ಸಂಸಾರ ಸಮೇತನಾಗಿ ಸ್ಕೂಟಿಯಲ್ಲಿ, ಮಳೆಯಿರಲಿ ಬಿಸಿಳರಲಿ ಲೆಕ್ಕಿಸದೆ ಈ ಸ್ಥಳಕ್ಕೆ ಬರುತ್ತಿದ್ದೆವು. ಹಂತ ಹಂತವಾಗಿ ರೂಪುಗೊಳ್ಳುತ್ತಿದ್ದ ಈ ಪುಟಾಣಿ ಮನೆಯನ್ನು ನೋಡುವುದೇ ನಮಗೆ ಆನಂದವಾಗಿತ್ತು .
ಬಹುತೇಕ ಮಂದಿ ಕೇಳಿದ್ದರು ' ಅಯ್ಯೋ ಈ ಸಿಟಿ ಮದ್ಯ ಬಿಟ್ಟು ಅಷ್ಟು ದೂರ ಹೋಗ್ತಾ ಇದ್ದೀರಾ ?' ಅದಕ್ಕೆ ನಾವು 'ಎಷ್ಟೇ ದೂರ ಹೋದರು , ಹೋಗೋದು ನಮ್ಮ ಸ್ವಂತ ಮನೆಗೆ ತಾನೇ' ಅಂತ ಉತ್ತರಿಸುತ್ತಿದ್ದೆವು !
ಮನೆ ಗ್ರಹ ಪ್ರವೇಶದ ನಂತರವೂ ನಮ್ಮ ಮೇಸ್ತ್ರಿ ಕೆಲವು ಚೂರು ಪಾರೂ ಕೆಲಸಗಳನ್ನು ನಮ್ಮ ಪಾಲಿಗೆ ಬಿಟ್ಟು ಹೋಗಿದ್ದ. ಕಡೆಗೆ ಒಬ್ಬ ನಿವೃತ್ತಿಯ ಅಂಚಿನಲ್ಲಿದ್ದ ಗಾರೆ ಕೆಲಸ ಮಾಡುವ ಅಜ್ಜನಿಂದ ಮಾಡಿಸಿದೆ. ನಾ ಅವನ ಹೆಲ್ಪರ್ ಆದೆ, ಸಿಮೆಂಟು ಮರಳು ಕಲಸಿ ಕೊಡುವುದು ಮರಳು ಜಾಡಿ ಹಿಡಿಯುವುದು. ಆತ ಹೆಚ್ಚು ಸೊಂಟ ಬಗ್ಗಿಸುತ್ತಿರಲಿಲ್ಲ, ಆಗ ನಾ ಅನುಕೂಲವಾಗುವಂತೆ ಕೆಲವೊಮ್ಮೆ ಸಿಮೆಂಟು ಬಾಣಲೆಯನ್ನು ಎತ್ತರಕ್ಕೆ ಎತ್ತಿ ಹಿಡಿಯುವುದು , ಇಲ್ಲವೇ ತಲೆ ಮೇಲೆ ಇಟ್ಟುಕೊಳ್ಳುವುದು ಮಾಡುತ್ತಿದ್ದೆ. ಈ ಎಲ್ಲಾ ಕೆಲಸಗಳೂ ಕೆಲವೊಮ್ಮೆ ಬೇಸರ ತಂದರೂ ಒಂದು ರೀತಿ ಖುಷಿ ಕೊಡುತ್ತಿತ್ತು 'ಎಷ್ಟೇ ಆದರೂ ನಮ್ ಮನೆ ಕೆಲಸ ಆಲ್ವಾ ?' ಈ ಮಾತನ್ನು ನಾನೂ ನನ್ನವಳು ಹಲವಾರು ಭಾರಿ ಒಬ್ಬರಿಗೊಬ್ಬರು ಹೇಳಿಕೊಂಡು ಮುಖದಲ್ಲಿ ನಗುವನ್ನು ತಂದು ಕೊಳ್ಳುತ್ತಿದ್ದೆವು.
ಈ ರಾತ್ರಿ ನನಗೇಕೋ ನಿದ್ದೆ ಬರುತ್ತಿಲ್ಲ, ಮೊದಲೊಮ್ಮೆ ಯಾರೋ ಕೇಳಿದ್ದರು ' ಆ ಏರಿಯಾದಲ್ಲಿ ಅಕ್ಕ ಪಕ್ಕ ಅಷ್ಟೇನೂ ಮನೆಗಲಿಲ್ವಂತೆ ?, ಆ ಒಂಟಿ ಮನೇಲಿ ನಿಮಗ್ ಭಯ ಆಗಲ್ವಾ? ' ಇಂದು ಸಹದ್ಯೋಗಿ ಒಬ್ಬರು ಕೇಳಿದರು ' ಮನೇಲಿ ಒಬ್ರೇ ಇರೋಕೆ ಬೋರ್ ಆಗೋಲ್ವಾ? ಎಷ್ಟೂ ಅಂತ ಟೀ ವಿ ನೋಡ್ತೀರಾ ? ರಾತ್ರಿ ಭಯ ಆಗೋಲ್ವಾ ? '
ನಾ ಮೆನೆಯ ಒಂದು ಮೊಲೆಯಲ್ಲಿ ಬಂದು ನಿಂತಿದ್ದೆ, ಇದೆ ಮೂಲೆಯಲ್ಲಿ ಮೊದಲು ನನ್ನ ಕೈಯಿಂದ ಗುದ್ದಲಿ ಪೂಜೆ ಮಾಡಿದ್ದು. ಹಾಲಿನ ಗೋಡೆಯನ್ನೊಮ್ಮೆ ನೇವರಿಸಿದೆ , ಅಡುಗೆ ಮನೆಗೆ ನಡೆದೇ, ಒಪ್ಪವಾಗಿ ಜೋಡಿಸಿದ್ದ ಪಾತ್ರೆಗಳನ್ನೆಲ್ಲಾ ನೋಡಿ, ಏನೇ ಮಾಡಿದರೂ ಅಚ್ಚುಕಟ್ಟಾಗಿ ಮಾಡುವ ಅರ್ಧಾಂಗಿಯ ನೆನಪಾಯ್ತು .
ಮಂಚದ ಮೇಲೆ ಮೆಲಗಲಾಗಲಿಲ್ಲ , ನೆಲದ ಮೇಲೆ ಮಲಗಿದೆ ತಲೆ ದಿಂಬು ಬೇಡ ಅನ್ನಿಸಿತು, ಕೈ ಮಡಚಿ ಒಂದು ಪಕ್ಕಕ್ಕೆ ತಿರುಗಿ ಮಲಗಿದೆ, ಬಹಳ ಹೊತ್ತು ನಿದ್ದೆ ಬರಲಿಲ್ಲ, ಕೆಲವರು ಹಲವಾರು ರೀತಿಯ ಟೈಲ್ಸ್ ಗಳನ್ನು ಹಾಕುವ ಸಲಹೆಗಳನ್ನು ಕೊಟ್ಟಿದ್ದು ಮತ್ತೆ ನೆನಪಾಯಿತು . ಯಾವಾಗ ನಿದ್ದೆಗೆ ಜಾರಿದೇನೋ ತಿಳಿಯಲಿಲ್ಲ.
ಬೆಳಿಗ್ಗೆ ಎದ್ದು ರೆಡಿಯಾದೆ, ಬಾಗಿಲು ಹಾಕಿ ಆಫೀಸಿಗೆ ಹೊರಟೆ. ತುಸು ದೂರದಲ್ಲಿ ನಿಂತು ನನ್ನ ಪುಟಾಣಿ ಮನೆಯ ಕಡೆ ನೋಡಿದೆ. ಈಗ ಅದು ಸಿಮೆಂಟು, ಗಾರೆ, ಇಟ್ಟಿಗೆಗಳಿಂದ ಕೂಡಿದ ಕಟ್ಟಡದಂತೆ ಕಾಣುತ್ತಿಲ್ಲ, ನನ್ನದೇ ರಕ್ತ, ಸ್ನಾಯು, ಮಾಂಸ ಖಂಡಗಳಿಂದ ತುಂಬಿಕೊಂಡ ಆಶ್ರಯ ಕೊಡುವ ಹಿರಿಯನಂತೆ ಕಾಣುತ್ತಿದೆ .