Wednesday, August 9, 2023

https://stopncii.org - stop misusing your image by criminals

 What is https://stopncii.org ?


StopNCII.org is a free tool designed to support
vict
ims of Non-Consensual Intimate Image (NCII) abuse.


Thursday, June 29, 2023

Sparsha Shile Poetry

 



ಸ್ಪರ್ಶ ಶಿಲೆ

 

ಹಟಹಿಡಿದ ಅವಳ ತಪಕ್ಕೊಲಿದು

ಕೈ  ಹಿಡಿದ ಹೆಂಗರುಳಿನವನು

ಹೆಣ್ತನದ ಗಂಧದೊಳು ತನ್ನ ಬೆವರಿನ ಘಮ

ಬೆರೆಸಿ ಅಂಗಸಂಗದೊಳೊಂದಾದ

ಅರ್ಧನಾರೀಶ್ವರ

 

ಲಾವಣ್ಯ ಪ್ರಭಾ ಅವರ ಕವನಗಳ ಗುಚ್ಛ ಸ್ಪರ್ಶ ಶಿಲೆ ಕವನ ಸಂಕಲನ. ಇದರಲ್ಲಿ  ನಲವತ್ತು ಕವಿತೆಗಳಿವೆ, ಅವುಗಳಲ್ಲಿ  ಲಯರೂಪಿನಿಲ್ಲಲಾರೆವು ಇನ್ನಿಲ್ಲಿ ನಾವು ಬಹುಕಾಲ, ಸ್ಪರ್ಶ ಶಿಲೆ, ಬುದ್ಧ ಪೂರ್ಣಿಮೆಯಂದು, ಯುಗಾದಿ, ಮೋಹತೀರ, ಅಂತಃಪುರ ಗೀತೆ, ಬೆಳಗಿನ ತಾಯಿ ಕತ್ತಲೆ, ಶಿವರಾತ್ರಿ, ಚೆಲುವ, ಕಾವ್ಯವೆನ್ನುವುದು ಶುದ್ಧ ಗಂಡು.... ನನ್ನ ಗಮನ ಹೆಚ್ಚು ಸೆಳೆದ ಕವಿತೆಗಳು.

 

ಕವಯತ್ರಿ ಶಿವನನ್ನು ಬಣ್ಣಿಸುವ ರೀತಿ ಅನನ್ಯವಾಗಿದೆ. ಅದು ಲಯರೂಪಿ ಮತ್ತು ಶಿವರಾತ್ರಿ ಕವನದಲ್ಲಿ ಬಹಳ ಚೆನ್ನಾಗಿ ಮೂಡಿದೆ.

 

ಅಂದು ಕತ್ತಲೆಗೆ ಬಂದಂತೆ ಕಣ್ಣು

ಶಿವನೆದೆಯಲ್ಲಿ ದೀಪ ಅವನ ಹೆಣ್ಣು

 

ಮೇಲು ಕೋಟೆಯ ಚೆಲುವ ನಾರಾಯಣಸ್ವಾಮಿಯ ಮೋಹಿಸುವ ಹೊರಗಮ್ಮ ದೇವಿಯ ಬಗ್ಗೆ ಇರುವ ಕವನ ʼಚೆಲುವʼ ಮನಸೆಳೆಯುತ್ತದೆ  

   

“ಹಾಗೆಲ್ಲ ಮುಟ್ಟುವ ಹಾಗಿಲ್ಲ” ಎನ್ನುವಂತ ಸಾಲುಗಳನ್ನೊಳಗೊಂಡ ʼಬುದ್ಧ ಪೂರ್ಣಿಮೆಯಂದುʼ ಕವನವು ಯಶೋಮತಿಯ ತಳಮಳವ ನಮ್ಮೆದುರು ತೆರೆದಿಡುತ್ತದೆ.

 

ವಿವಿಧ ವಿಷಯಗಳ ಮೇಲೆ ಬರೆದಿರುವ ಕವನಗಳನ್ನು ಸ್ಪರ್ಶಶಿಲೆ ಕವನಸಂಕಲನವು ಒಳಗೊಂಡಿದೆ.

 

ಇವರ ಕವನಗಳ ಕೊನೆ ಹಂತದ ಸಾಲುಗಳ ತೀಕ್ಷ್ಣತೆಗೆ ಒಂದು ಉದಾಹರಣೆ ʼಅಂತಃಪುರ ಗೀತೆʼ ಕವನದಲ್ಲಿದೆ. ಅದರಲ್ಲಿಬಹು ದಿನಗಳ ನಂತರ ಹಿಂದುರಿಗಿದ ರಾಜನಿಗೆ ರಾಣಿಯು ಹೇಳುವ ಈ ಸಾಲುಗಳು ಮನಮುಟ್ಟುತವೆ.

 

“ಓಹ್! ಎದೆಗವಚ ಇನ್ನು ಯಾಕೆ?

ನಾನಿಲ್ಲವೇ?

ನಿಮ್ಮ ತುಂಟನಗು, ಆಸೆಗಣ್ಣು

ಅರ್ಥವಾಗುವುದೆನಗೆ

ಅದಕ್ಕೂ... ಮೊದಲು...

ನಿಮ್ಮ ರತ್ನಖಚಿತ “ಕಿರೀಟ”

ಕೊಂಚ.... ತೆಗೆದಿರಿಸಿ ದೂ..ರ

ನನ್ನ ದೊರೆ

ನಂತರ... ಸಗ್ಗ ಸೆರೆ”

 

ಬಹುತೇಕ ಕವಿಗಳು ಕವಿತೆ ಕಟ್ಟುವಾಗಿನ ಅನುಭವ ʼಕಾವ್ಯವೆನ್ನುವುದು ಶುದ್ಧ ಗಂಡುʼ ಕವನದಲ್ಲಿದೆ.

 

ಮತ್ತಷ್ಟು ಮಗದಷ್ಟು ಕವನಗಳು ಬರಲಿ ಎಂದು ಆಶಿಸುತ್ತಾ ಶುಭಕೋರುವೆ


Friday, June 2, 2023

ನಿನಗೆ ನೀನೇ ಗೆಳೆಯ ನಿನಗೆ ನೀನೇ - ಗೋಪಾಲ ಕೃಷ್ಣ ಅಡಿಗ

 

ನಿನಗೆ ನೀನೇ ಗೆಳೆಯ ನಿನಗೆ ನೀನೇ,
ಅವರಿವರ ನಂಬುಗೆಯ ಮಳಲರಾಶಿಯ ಮೇಲೆ
ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?
ನಿನಗೆ ನೀನೇ,ಗೆಳೆಯ ನಿನಗೆ ನೀನೇ!

ಮನಸಿಡಿದು ಹೋಳಾಗುತಿರುವ ವೇಳೆ
ಕನಸುಗಳ ಗುಳ್ಳೆಗಳು ಒಡೆದೊಡೆದು ಬೀಳೆ,
ಜನುಮದೀ ರಿಂಗಣದ ಕಾಲುಗಳು ಸೋಲೆ
ನಿನಗೆ ನೀನೇ,ಗೆಳೆಯ ನಿನಗೆ ನೀನೇ!

ತೋಟದಲಿ ಗಿಡಗಿಡಕೆ ಹೂವರಳಿ ನಿಲ್ಲೆ,
ಮಕರಂದದುತ್ಸವವು ಬಿತ್ತರಿಸುವಲ್ಲೆ
ಮರಿದುಂಬಿ ಸಾಲೇನು,ಅರಗಿಳಿಯ ಮಾಲೆ!
ಬರೆ ಮಾಗಿ,ಬರಿ ತೋಟ, ಭಣಗುಡುವುದಲ್ಲೆ!
ನಿನ್ನ ಬಗೆ ನಗೆಯಾಗಿ ಹರಿದು ಬರುತಿರಲು,
ಸಂತಸದ ಸಂಗೀತ ಹೊನಲಿಡುತಲಿರಲು,
ಏನೊಲವು, ಏನು ಕಳೆ,ಎಂಥ ಸುಮ್ಮಾನ!
ಏನಾಟ,ಏನೂಟ ಎಂಥ ಸಮ್ಮಾನ
ನಿನ್ನ ಕರುಳನು ಕೊರಗು ಹುಳು ಕಡಿಯುತಿರಲು
ನಿನ್ನ ಮನದಿ ನಿರಾಶೆ ಮಂಜು ಮುಸುಕಿರಲು,
ಮೊಗದಿ ಕಾರ್ಮುಗಿಲೋಳಿ ದಾಳಿಗೊಂಡಿರಲು
ಎಲ್ಲೊಲವು,ಎಲ್ಲಿ ಕಳೆ ಎಲ್ಲಿ ಸುಮ್ಮಾನ?
ನಿನಗೆ ನೀನೆ ತ್ರಾಣ ಮಾನ ಸಮ್ಮಾನ.

ಜಗವೆಲ್ಲ ನಗೆಯ ಹೊಳೆಯಾಗಿ ಗುಳುಗುಳಿಸೆ
ಸೊಗವಲ್ಲಿ,ಸೊಗವಿಲ್ಲಿ, ಬಂದು ಗಮಗಮಿಸೆ
ಹುಣ್ಣಿಮೆಯ ದಿನದ ಗವಿಯೊಡಲಂತೆ ಮನವು
ತನ್ನ ಕತ್ತಲೆಗಂಜಿ ತನ್ನೊಳಡಗಿರಲು,
ನಿನಗೆ ನೀನೇ ಗೆಳೆಯ,ನಿನಗೆ ನೀನೇ!

ಕವಲುದಾರಿಯ ಮುಂದೆ ನೀ ಬಂದು ನಿಂದು
ಗುರಿಯಾವುದೆಂದು ಮುಂಗಾಣದಿರೆ ನೊಂದು
ಮನದ ಪೊರೆಪೊರೆಯೊಳುರಿಯೆದ್ದು ಭುಗಿಲಿಡಲು,
ನಿನಗೆ ನೀನೇ ಗೆಳೆಯ ನಿನಗೆ ನೀನೇ!

ನೀನೆ ನಿನ್ನಯ ಬಂಧು ನೀ ನಿನ್ನ ಶತ್ರು,
ನೀ ರಸಿಕ,ನೀನೇ ಹಾ! ರಸಿಕತೆಯ ವಸ್ತು;
ಸ್ವರ್ಗ ನರಕದ ಅಳವುನಲವುಗಳು ಬಿತ್ತು,
ನೀನೆ ಬಾಳುವೆಯಿರುಳು,ನೀ ನಿನ್ನ ಹೊತ್ತು;
ನಿನ್ನೆದೆಯ ಪಾಡೆ ನಿನ್ನೊಲಯಿಸುವ ಹಾಡು;
ನಿನ್ನೊಡಲ ನಾಡೆ ನಿನೈಸಿರಿಯ ಬೀಡು,
ನಿನಗೆ ನೀನೇ ಗೆಳೆಯ ನಿನಗೆ ನೀನೇ!

ಬಾಳ ಕಾಳಗದಲ್ಲಿ ಏಕಾಂಗಿ ವೀರ!
ನೇಹನಲುಮೆಗಳೆದೆಗೆ ಬರಿಯ ಆಹಾರ!
ನಿನ್ನ ಅಂತ:ಸತ್ವ ಸಾರ ಆಧಾರ!
ಉಳಿದೆಲ್ಲವು ಬೆಸಕೆ ಬರದ ಸಿಂಗಾರ!

ನಿನ್ನಾತ್ಮದಿದಿರು ನೀ ನಿಂತಿರುವ ವೇಳೆ;
ಆತ್ಮ ಸಾಕ್ಷಿಗೆ ಸಾಕ್ಷಿಗುಡುತಲಿರೆ ಬಾಳೆ;
ಮೃತ್ಯುವಿನ ಹಿಡಿತ ಬಿಗಿಯಾಗುತಿರೆ ಮೇಲೆ
ಕಿರುತಾರಗೆಯದೊಂದು ಓರಗೆಯ ಕೋರೆ
ನಿನಗೆ ನೀನೇ,ಗೆಳೆಯ ನಿನಗೇ ನೀನೇ!

ದೂರದೂರದ ಮಾತು,ಗೀತ ಹರಿತಂದು,
ಮರೆತ ಬಾಳಿನ ಕುದಿತ ಮನದಿ ನೆಲೆನಿಂದು,
ಭವಬಣ್ಣ ಗಾಜೊಳಗಾಗ ದಿವದ
ಸಪ್ತವರ್ಣದ ಕಾಂತಿ ಕೋರೈಸೆ ಕಣ್ಣ,
ಬಳಿಕೆಲ್ಲ ಬಾಳುದ್ದ ಕಾರಿರುಳು ಕವಿಯೆ,
ನಿನಗೆ ನೀನೇ ಗೆಳೆಯ,ನಿನಗೆ ನೀನೇ!

ಒಂಟಿ ಮುಗಿಲದೊ ನೋಡು,ಬಾನ ಬಯಲಿನಲಿ
ತನ್ನೆದೆಯ ರಸದಲ್ಲಿ ತಾನೆ ಕರಕರಗಿ,
ತನ್ನೆದೆಯ ಹಾಡೊಳು ತನ್ನ ಮೈಮರೆಸಿ
ಯಾವೆಡೆಗೆ ಸಾಗುತಿದೆ ಏನನಾಧರಿಸಿ?
ಆ ಹಾರು ಹಕ್ಕಿಯನು ಕಂಡಿಲ್ಲವೇನು?
ಯಾವ ಮರ,ಯಾವ ಗಿಡವೆಲ್ಲಾದರೇನು?
ತನ್ನ ರೆಕ್ಕೆಯ ನಂಬುಗೆಯನೊಂದೆ ಬೆಳೆದು
ತನ್ನ ಬಾಳನು ತನ್ನ ಹಿಡಿತದಲಿ ಬಿಗಿದು
ತನ್ನ ಪಾಡನು ತಾನೆ ಸವಿಸವಿದು
ಸಾಗುತಿದೆಯಲ್ಲ;ಅದಕಿನ್ನಾವ ನೆಚ್ಚು?
ನಿನ್ನೆದೆಯ ಬಲವೊಂದೆ ನಿನ್ನ ಬೆಂಬಲವು;
ನಿನ್ನ ಚಿತ್ಕಳೆಯೊಂದೆ ನಿನ್ನ ಹಂಬಲವು
ನಿನ್ನೆದೆಯ ಮಧುರಿಮೆಯೆ,ನಿನ್ನೊಲವಿನುರಿಯೆ;
ನಿನ್ನ ತ್ಯಾಗದ ಸೊಗವೆ,ರಾಗದುಬ್ಬೆಗವೆ;

ನಿನ್ನೆದೆಯನೇ ಹಿಳಿದು ಹಿಳಿದುದನು ಮೆದ್ದು,
(ನಿನ್ನೊಡಲ ಯಾತನೆಗೆ ಅದೆ ಹಿರಿಯ ಮದ್ದು!!)
ನಿನ್ನ ಮರುಕದ ಅಗ್ನಿದಿವ್ಯದಲಿ ಗೆದ್ದು,
ಮೇಲೆ ಬಾ, ಹೂವಾಗಿ ಜೇನಾಗಿ ಪುಟಿದು
ತೇಲಿ ಬಾ, ಬೆಳ್ಮುಗಿಲ ತುಣುಕಾಗಿ ನೆಗೆದು
ಬಾನೆತ್ತರಕು ಜಗದ ಬಿತ್ತರಕು ಬೆಳೆದು,
ಅದೆ ಸಾಧನೆಯ ಸಾಧ್ಯ; ಅದೆ ಬಾಳಿನೊಸುಗೆ;
ನಿನಗೆ ನೀನೇ ಕೊನೆಗು ನೀನೇ ನಿನಗೆ!