ನಿನಗೆ ನೀನೇ ಗೆಳೆಯ ನಿನಗೆ
ನೀನೇ,
ಅವರಿವರ ನಂಬುಗೆಯ ಮಳಲರಾಶಿಯ ಮೇಲೆ
ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?
ನಿನಗೆ ನೀನೇ,ಗೆಳೆಯ ನಿನಗೆ ನೀನೇ!
ಮನಸಿಡಿದು ಹೋಳಾಗುತಿರುವ ವೇಳೆ
ಕನಸುಗಳ ಗುಳ್ಳೆಗಳು ಒಡೆದೊಡೆದು ಬೀಳೆ,
ಜನುಮದೀ ರಿಂಗಣದ ಕಾಲುಗಳು ಸೋಲೆ
ನಿನಗೆ ನೀನೇ,ಗೆಳೆಯ ನಿನಗೆ ನೀನೇ!
ತೋಟದಲಿ ಗಿಡಗಿಡಕೆ ಹೂವರಳಿ ನಿಲ್ಲೆ,
ಮಕರಂದದುತ್ಸವವು ಬಿತ್ತರಿಸುವಲ್ಲೆ
ಮರಿದುಂಬಿ ಸಾಲೇನು,ಅರಗಿಳಿಯ ಮಾಲೆ!
ಬರೆ ಮಾಗಿ,ಬರಿ ತೋಟ, ಭಣಗುಡುವುದಲ್ಲೆ!
ನಿನ್ನ ಬಗೆ ನಗೆಯಾಗಿ ಹರಿದು ಬರುತಿರಲು,
ಸಂತಸದ ಸಂಗೀತ ಹೊನಲಿಡುತಲಿರಲು,
ಏನೊಲವು, ಏನು ಕಳೆ,ಎಂಥ ಸುಮ್ಮಾನ!
ಏನಾಟ,ಏನೂಟ ಎಂಥ ಸಮ್ಮಾನ
ನಿನ್ನ ಕರುಳನು ಕೊರಗು ಹುಳು ಕಡಿಯುತಿರಲು
ನಿನ್ನ ಮನದಿ ನಿರಾಶೆ ಮಂಜು ಮುಸುಕಿರಲು,
ಮೊಗದಿ ಕಾರ್ಮುಗಿಲೋಳಿ ದಾಳಿಗೊಂಡಿರಲು
ಎಲ್ಲೊಲವು,ಎಲ್ಲಿ ಕಳೆ ಎಲ್ಲಿ ಸುಮ್ಮಾನ?
ನಿನಗೆ ನೀನೆ ತ್ರಾಣ ಮಾನ ಸಮ್ಮಾನ.
ಜಗವೆಲ್ಲ ನಗೆಯ ಹೊಳೆಯಾಗಿ ಗುಳುಗುಳಿಸೆ
ಸೊಗವಲ್ಲಿ,ಸೊಗವಿಲ್ಲಿ, ಬಂದು ಗಮಗಮಿಸೆ
ಹುಣ್ಣಿಮೆಯ ದಿನದ ಗವಿಯೊಡಲಂತೆ ಮನವು
ತನ್ನ ಕತ್ತಲೆಗಂಜಿ ತನ್ನೊಳಡಗಿರಲು,
ನಿನಗೆ ನೀನೇ ಗೆಳೆಯ,ನಿನಗೆ ನೀನೇ!
ಕವಲುದಾರಿಯ ಮುಂದೆ ನೀ ಬಂದು ನಿಂದು
ಗುರಿಯಾವುದೆಂದು ಮುಂಗಾಣದಿರೆ ನೊಂದು
ಮನದ ಪೊರೆಪೊರೆಯೊಳುರಿಯೆದ್ದು ಭುಗಿಲಿಡಲು,
ನಿನಗೆ ನೀನೇ ಗೆಳೆಯ ನಿನಗೆ ನೀನೇ!
ನೀನೆ ನಿನ್ನಯ ಬಂಧು ನೀ ನಿನ್ನ ಶತ್ರು,
ನೀ ರಸಿಕ,ನೀನೇ ಹಾ! ರಸಿಕತೆಯ ವಸ್ತು;
ಸ್ವರ್ಗ ನರಕದ ಅಳವುನಲವುಗಳು ಬಿತ್ತು,
ನೀನೆ ಬಾಳುವೆಯಿರುಳು,ನೀ ನಿನ್ನ ಹೊತ್ತು;
ನಿನ್ನೆದೆಯ ಪಾಡೆ ನಿನ್ನೊಲಯಿಸುವ ಹಾಡು;
ನಿನ್ನೊಡಲ ನಾಡೆ ನಿನೈಸಿರಿಯ ಬೀಡು,
ನಿನಗೆ ನೀನೇ ಗೆಳೆಯ ನಿನಗೆ ನೀನೇ!
ಬಾಳ ಕಾಳಗದಲ್ಲಿ ಏಕಾಂಗಿ ವೀರ!
ನೇಹನಲುಮೆಗಳೆದೆಗೆ ಬರಿಯ ಆಹಾರ!
ನಿನ್ನ ಅಂತ:ಸತ್ವ ಸಾರ ಆಧಾರ!
ಉಳಿದೆಲ್ಲವು ಬೆಸಕೆ ಬರದ ಸಿಂಗಾರ!
ನಿನ್ನಾತ್ಮದಿದಿರು ನೀ ನಿಂತಿರುವ ವೇಳೆ;
ಆತ್ಮ ಸಾಕ್ಷಿಗೆ ಸಾಕ್ಷಿಗುಡುತಲಿರೆ ಬಾಳೆ;
ಮೃತ್ಯುವಿನ ಹಿಡಿತ ಬಿಗಿಯಾಗುತಿರೆ ಮೇಲೆ
ಕಿರುತಾರಗೆಯದೊಂದು ಓರಗೆಯ ಕೋರೆ
ನಿನಗೆ ನೀನೇ,ಗೆಳೆಯ ನಿನಗೇ ನೀನೇ!
ದೂರದೂರದ ಮಾತು,ಗೀತ ಹರಿತಂದು,
ಮರೆತ ಬಾಳಿನ ಕುದಿತ ಮನದಿ ನೆಲೆನಿಂದು,
ಭವಬಣ್ಣ ಗಾಜೊಳಗಾಗ ದಿವದ
ಸಪ್ತವರ್ಣದ ಕಾಂತಿ ಕೋರೈಸೆ ಕಣ್ಣ,
ಬಳಿಕೆಲ್ಲ ಬಾಳುದ್ದ ಕಾರಿರುಳು ಕವಿಯೆ,
ನಿನಗೆ ನೀನೇ ಗೆಳೆಯ,ನಿನಗೆ ನೀನೇ!
ಒಂಟಿ ಮುಗಿಲದೊ ನೋಡು,ಬಾನ ಬಯಲಿನಲಿ
ತನ್ನೆದೆಯ ರಸದಲ್ಲಿ ತಾನೆ ಕರಕರಗಿ,
ತನ್ನೆದೆಯ ಹಾಡೊಳು ತನ್ನ ಮೈಮರೆಸಿ
ಯಾವೆಡೆಗೆ ಸಾಗುತಿದೆ ಏನನಾಧರಿಸಿ?
ಆ ಹಾರು ಹಕ್ಕಿಯನು ಕಂಡಿಲ್ಲವೇನು?
ಯಾವ ಮರ,ಯಾವ ಗಿಡವೆಲ್ಲಾದರೇನು?
ತನ್ನ ರೆಕ್ಕೆಯ ನಂಬುಗೆಯನೊಂದೆ ಬೆಳೆದು
ತನ್ನ ಬಾಳನು ತನ್ನ ಹಿಡಿತದಲಿ ಬಿಗಿದು
ತನ್ನ ಪಾಡನು ತಾನೆ ಸವಿಸವಿದು
ಸಾಗುತಿದೆಯಲ್ಲ;ಅದಕಿನ್ನಾವ ನೆಚ್ಚು?
ನಿನ್ನೆದೆಯ ಬಲವೊಂದೆ ನಿನ್ನ ಬೆಂಬಲವು;
ನಿನ್ನ ಚಿತ್ಕಳೆಯೊಂದೆ ನಿನ್ನ ಹಂಬಲವು
ನಿನ್ನೆದೆಯ ಮಧುರಿಮೆಯೆ,ನಿನ್ನೊಲವಿನುರಿಯೆ;
ನಿನ್ನ ತ್ಯಾಗದ ಸೊಗವೆ,ರಾಗದುಬ್ಬೆಗವೆ;
ನಿನ್ನೆದೆಯನೇ ಹಿಳಿದು ಹಿಳಿದುದನು ಮೆದ್ದು,
(ನಿನ್ನೊಡಲ ಯಾತನೆಗೆ ಅದೆ ಹಿರಿಯ ಮದ್ದು!!)
ನಿನ್ನ ಮರುಕದ ಅಗ್ನಿದಿವ್ಯದಲಿ ಗೆದ್ದು,
ಮೇಲೆ ಬಾ, ಹೂವಾಗಿ ಜೇನಾಗಿ ಪುಟಿದು
ತೇಲಿ ಬಾ, ಬೆಳ್ಮುಗಿಲ ತುಣುಕಾಗಿ ನೆಗೆದು
ಬಾನೆತ್ತರಕು ಜಗದ ಬಿತ್ತರಕು ಬೆಳೆದು,
ಅದೆ ಸಾಧನೆಯ ಸಾಧ್ಯ; ಅದೆ ಬಾಳಿನೊಸುಗೆ;
ನಿನಗೆ ನೀನೇ ಕೊನೆಗು ನೀನೇ ನಿನಗೆ!
No comments:
Post a Comment