Saturday, July 13, 2013

ನಾ ಲೆಕ್ಕದಲ್ಲಿ ತುಂಬಾ ವೀಕು

ನಾ ಲೆಕ್ಕದಲ್ಲಿ ತುಂಬಾ ವೀಕು 
==============

"ಶರೀಫಾ , ಐದ್ ಎಂಟ್ಲೀ ಎಷ್ಟು ?" ಅಂತಾ ಲೆಕ್ಕದ ಮೇಷ್ಟ್ರು ಕೇಳಿದ್ರು ನಾನು ನಲವತ್ತೆಂಟು ಅಂದೆ . ಹಿಡಿಯೋ ಕೈ ಅಂದ್ರು, ನಾ ಹಿಡಿದೆ "ಐದನೇ ಕ್ಲಾಸ್ ಓದ್ ತಾ ಇದ್ದೀಯಾ, ಇನ್ನೂ ಐದ್ ಒಂದ್ಲಾ ಐದ್ ಮಗ್ಗಿ ಬರಲ್ಲ ಬೊಡೆತಕ್ಕೆ " ಅಂದು ದಪ್ಪವಾದ ಬೆತ್ತ ತಗೊಂಡು ಎರಡು ಕೈಗುಳ್ ಗೆ ಹತ್ತು, ಹನ್ನೆರಡು ಏಟು ಕೊಟ್ರು , ಹತ್ತೋ ಹನ್ನೆರಡೋ ಗೊತ್ತಾಗ್ಲಿಲ್ಲ , ಯಾಕಂದ್ರೆ ನಾ ಲೆಕ್ಕದಲ್ಲಿ ತುಂಬಾ ವೀಕು. ಒಂದೆರಡು ಏಟುಗಳು ಎಡ ಕೈ ಮಣಿಕಟ್ಟಿಗೆ ಬಿದ್ದವು. ಒಂದು ರೀತಿ ಬಳೆ ಹಾಕಿದ ಹಾಗೆ ಕೆಂಪಗೆ ಗಾಯ ಆಗಿ ಸಣ್ಣದಾಗಿ ರಕ್ತ ಬರೋಕೆ ಶುರು ಆಯ್ತು. ಆಮೇಲೆ ಮೇಷ್ಟ್ರು 'ವೋಗ್ ಕೂತ್ಕೋ' ಅಂದ್ರು . ಕೂತವನು ಸುಮ್ಮನಿರಲಾರದೆ ನನ್ ಗೆಳೆಯ ವಿನಾಯಕನ ಬಲಗೈಲಿ ಕಟ್ಟಿರೋಂತ ದೇವಸ್ಥಾನದ ಕೆಂಪು ದಾರದ ರೀತಿ ಗಾಯದಿಂದ ಬರ್ತಿದ್ದ ರಕ್ತಾನ ಡಿಸೈನ್ ಡಿಸೈನ್ ಮಾಡಿ ಕೂತುಕೊಂಡೆ.

ಮನೆಗ್ ಬಂದಾಗ ಕೆಂಪು ಕೆಂಪಾಗಿದ್ದ ಕೈಗಳನ್ನ ನೋಡಿ ಅಮ್ಮಿ ಕೇಳಿದ್ರು ನಾ ನಡೆದ ವಿಷ್ಯ ಹೇಳ್ದೆ , ಅಮ್ಮಿ ನನ್ ಕಿವಿ ಹಿಂಡಿ ಎರಡು ಮೂರು ಸಾರಿ ತಿರುವಿದರು ಯಾವಾಗಲೂ ಇದೆ ನಿಂದು ಅಂತ , ಎರಡು ಸಲ ತಿರುವಿದರೋ ಮೂರು ಸಲ ತಿರುವಿದರೋ ಗೊತ್ತಿಲ್ಲ ಯಾಕಂದ್ರೆ ನಾ ಲೆಕ್ಕದಲ್ಲಿ ತುಂಬಾ ವೀಕು. ಆಮೇಲೆ ಅಬ್ಬು ಬಂದ್ರು. ಅಮ್ಮಿ ವರದಿ ಒಪ್ಪಿಸಿದ್ರು. "ನಿನ್ ಮಗ ಏನೇ ಇಷ್ಟೊಂದು ದಡ್ಡ, ಅಕ್ ಪಕ್ಕದ್ ಮಕ್ಳನ್ ನೋಡು ಎಷ್ಟು ಹುಷಾರಾಗಿದ್ದಾರೆ" ಅಂತ ಅಮ್ಮಿಗೆ ಹೇಳಿ , ನನ್ ಕುಂಡಿಗಳ ಮೇಲೆ ಕೈಯಿಂದ ನಾಲ್ಕೈದು ಬಾರಿಸಿದರು. ಇನ್ನೂ ನೋಯ್ತಾನೆ ಇದೆ . ನಾಲ್ಕು ಬಾರಿಸಿದ್ರೋ ಐದು ಬಾರಿಸಿದ್ರೋ ಗೊತ್ತಿಲ್ಲ ಯಾಕಂದ್ರೆ........ ನಾ ಲೆಕ್ಕದಲ್ಲಿ ತುಂಬಾ ವೀಕು

Sunday, July 7, 2013

ಮಳೆ ಹನಿಗಳು 2

ಪ್ರಿಯೆ 
ನಿಮ್ಮೂರಿನಿಂದ 
ಕಳಿಸಿದ 
ಮುತ್ತುಗಳ 
ಸುರಿಮಳೆ 
ನಮ್ಮೂರಿನ 
ವರ್ಷಧಾರೆ 
ಎನ್ನ ಮೇಲೆ ಸುರಿಸಿದೆ

================

ಮಳೆಯಲ್ಲಿ 
ಏನೂ ಕಾಣಲಿಲ್ಲ 
ಹನಿ ಹನಿಯಲ್ಲೂ 
ಇದ್ದದ್ದು 
ಬರಿ ನೀನೆ ನೀನೇ
================

ಮಳೆಯ
ರೂಪದಲ್ಲಿಹ 
ನಿನ್ನ 
ಅಪ್ಪುಗೆಯಲ್ಲಿ 
ಎನ್ನ ಮರೆತಿಹೆನು 
ನೀರೆ

==================

ಮಳೆ ಹನಿಗಳು 1

ಅನುದಿನದ 
ಬೇಸರದ, ಬೈಗುಳಗಳ 
ಸುರಿಮಳೆಗಿಂತ 
ಇಂದಿನ ಈ 
ವರ್ಷಧಾರೆಯೇ 
ಚೆಂದ

=======================

ಎಲೇ 
ಗುಲಾಬಿಯೇ 
ನಿನ್ನ ಕಂಡು 
ಎನಗೆ ಈರ್ಷ್ಯೆ
ನಾನೂ ನಿನ್ನೊಡನೆ 
ಮಳೆಯಲ್ಲಿ 
ಮೀಯಲಾರದಾದೆನೆ

=========================

ಸಾಕು ಮಾಡು 
ಸ್ವಾತಿ ಮಳೆಯೇ 
ನನ್ನವಳ 
ಬಳಿ ಇರುವ 
ಮೂವತ್ತೆರಡು 
ಮುತ್ತುಗಳೇ ಸಾಕು 
ಅವಳ ಅಮೂಲ್ಯ ನಗುವಿಗೆ
=========================

ಲೋಕಕ್ಕೆ 
ಅಂಜಿಹೆನು 
ಇಲ್ಲದಿದ್ದರೆ 
ಮಳೆಯನ್ನೇ 
ಧರಿಸುತ್ತಿದ್ದೆನು
=========================


Saturday, July 6, 2013

ಸಂಬಂಧ

ಹೀಗೆಯೇ ಇರಲಿ 
ನಮ್ಮೀ ಸಂಬಂಧಗಳ 
ಎಳೆ 
ಬಿರುಗಾಳಿಯಲ್ಲೂ 
ಬುಡಮೇಲಾಗದ 
ಗರಿಕೆಯಂತೆ

ಸ್ವಯಂಕೃತ

ನನ್ನೀ 
ಬೇಸರಕೆ 
ನೀ ಅಲ್ಲ 
ಕಾರಣ 
ಇದೊಂದು 
ಸ್ವಯಂಕೃತ 
ಅಪರಾಧ

ಬೊಗಸೆ

ಕೈಗಳ ಮಧ್ಯೆ 
ಮುಖ 
ಹುದುಗಿಸಬೇಕೆನಿಸಿದೆ 
ಸಮಸ್ಯೆಗಳಿವೆ ಏನೇನೋ 
ಬೊಗಸೆಯ 
ಬಾವಿಯ ತಳದಲ್ಲಿ 
ನೆಮ್ಮದಿ 
ಸಿಗಬಹುದೇನೋ

ಕೆಲವರು

ಇಹರು 
ನಮ್ಮ 
ದಾರಿಯ 
ಮರೆಯದೆ 
ಕಾಯುವವರು 
ಕೆಲವರು. 
ನಮ್ಮನ್ನೇ 
ದಾರಿ ಮಾಡಿ 
ಮುಂದೆ ಸಾಗಿ 
ಮರೆಯುವವರು 
ಕೆಲವರು