ಸ್ಪರ್ಶ ಶಿಲೆ
“ಹಟಹಿಡಿದ ಅವಳ ತಪಕ್ಕೊಲಿದು
ಕೈ ಹಿಡಿದ ಹೆಂಗರುಳಿನವನು
ಹೆಣ್ತನದ ಗಂಧದೊಳು ತನ್ನ ಬೆವರಿನ ಘಮ
ಬೆರೆಸಿ ಅಂಗಸಂಗದೊಳೊಂದಾದ
ಅರ್ಧನಾರೀಶ್ವರ “
ಲಾವಣ್ಯ ಪ್ರಭಾ ಅವರ ಕವನಗಳ ಗುಚ್ಛ ಸ್ಪರ್ಶ ಶಿಲೆ ಕವನ ಸಂಕಲನ. ಇದರಲ್ಲಿ ನಲವತ್ತು ಕವಿತೆಗಳಿವೆ, ಅವುಗಳಲ್ಲಿ
ಲಯರೂಪಿ, ನಿಲ್ಲಲಾರೆವು ಇನ್ನಿಲ್ಲಿ ನಾವು ಬಹುಕಾಲ, ಸ್ಪರ್ಶ ಶಿಲೆ, ಬುದ್ಧ ಪೂರ್ಣಿಮೆಯಂದು, ಯುಗಾದಿ, ಮೋಹತೀರ, ಅಂತಃಪುರ ಗೀತೆ, ಬೆಳಗಿನ ತಾಯಿ ಕತ್ತಲೆ, ಶಿವರಾತ್ರಿ, ಚೆಲುವ, ಕಾವ್ಯವೆನ್ನುವುದು ಶುದ್ಧ ಗಂಡು.... ನನ್ನ ಗಮನ ಹೆಚ್ಚು ಸೆಳೆದ ಕವಿತೆಗಳು.
ಕವಯತ್ರಿ ಶಿವನನ್ನು ಬಣ್ಣಿಸುವ ರೀತಿ ಅನನ್ಯವಾಗಿದೆ. ಅದು ಲಯರೂಪಿ ಮತ್ತು ಶಿವರಾತ್ರಿ ಕವನದಲ್ಲಿ ಬಹಳ ಚೆನ್ನಾಗಿ ಮೂಡಿದೆ.
ಶಿವನೆದೆಯಲ್ಲಿ ದೀಪ ಅವನ ಹೆಣ್ಣು”
ಮೇಲು ಕೋಟೆಯ ಚೆಲುವ ನಾರಾಯಣಸ್ವಾಮಿಯ ಮೋಹಿಸುವ ಹೊರಗಮ್ಮ ದೇವಿಯ ಬಗ್ಗೆ ಇರುವ ಕವನ ʼಚೆಲುವʼ ಮನಸೆಳೆಯುತ್ತದೆ
“ಹಾಗೆಲ್ಲ ಮುಟ್ಟುವ ಹಾಗಿಲ್ಲ” ಎನ್ನುವಂತ ಸಾಲುಗಳನ್ನೊಳಗೊಂಡ ʼಬುದ್ಧ
ಪೂರ್ಣಿಮೆಯಂದುʼ ಕವನವು ಯಶೋಮತಿಯ ತಳಮಳವ ನಮ್ಮೆದುರು ತೆರೆದಿಡುತ್ತದೆ.
ವಿವಿಧ ವಿಷಯಗಳ ಮೇಲೆ ಬರೆದಿರುವ ಕವನಗಳನ್ನು ಸ್ಪರ್ಶಶಿಲೆ ಕವನಸಂಕಲನವು
ಒಳಗೊಂಡಿದೆ.
ಇವರ ಕವನಗಳ ಕೊನೆ ಹಂತದ ಸಾಲುಗಳ ತೀಕ್ಷ್ಣತೆಗೆ ಒಂದು ಉದಾಹರಣೆ ʼಅಂತಃಪುರ ಗೀತೆʼ ಕವನದಲ್ಲಿದೆ.
ಅದರಲ್ಲಿಬಹು ದಿನಗಳ ನಂತರ ಹಿಂದುರಿಗಿದ ರಾಜನಿಗೆ ರಾಣಿಯು ಹೇಳುವ ಈ ಸಾಲುಗಳು ಮನಮುಟ್ಟುತವೆ.
“ಓಹ್! ಎದೆಗವಚ ಇನ್ನು ಯಾಕೆ?
ನಾನಿಲ್ಲವೇ?
ನಿಮ್ಮ ತುಂಟನಗು, ಆಸೆಗಣ್ಣು
ಅರ್ಥವಾಗುವುದೆನಗೆ
ಅದಕ್ಕೂ... ಮೊದಲು...
ನಿಮ್ಮ ರತ್ನಖಚಿತ “ಕಿರೀಟ”
ಕೊಂಚ.... ತೆಗೆದಿರಿಸಿ ದೂ..ರ
ನನ್ನ ದೊರೆ
ನಂತರ... ಸಗ್ಗ ಸೆರೆ”
ಬಹುತೇಕ ಕವಿಗಳು ಕವಿತೆ ಕಟ್ಟುವಾಗಿನ ಅನುಭವ ʼಕಾವ್ಯವೆನ್ನುವುದು ಶುದ್ಧ ಗಂಡುʼ ಕವನದಲ್ಲಿದೆ.
ಮತ್ತಷ್ಟು ಮಗದಷ್ಟು ಕವನಗಳು ಬರಲಿ ಎಂದು ಆಶಿಸುತ್ತಾ ಶುಭಕೋರುವೆ.