Thursday, June 2, 2016

ಅಬಚೂರಿನ ಪೋಸ್ಟಾಫೀಸು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ


“ ನೂರೆಂಟು ಅರ್ಥದಲ್ಲಿ ಜೂರಾರು ಜನ ಉಪಯೋಗಿಸಿರುವ ಮಾತಿನಲ್ಲಿ ನನಗೆ ಏನನ್ನಿಸುತ್ತಿದೆಯೋ ಅದನ್ನು ನಾನು ಹೇಳಲಾರೆ ಎಂದೆನ್ನಿಸಿತು“  ಇದು ತೇಜಸ್ವಿಯವರ ಕಥೆಗಳಲ್ಲಿ ಬರುವ ಪರಿಣಾಮಕಾರಿ ಮಾತುಗಳಲ್ಲೊಂದು.

ಕಥೆ ಬರೆಯಬೇಕೆ? ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥೆಗಳನ್ನು ಓದಿ. ಅಬಚೂರಿನ ಪೋಸ್ಟಾಫೀಸು , ಕಥಾಸಂಕಲನವನ್ನು ಓದಿದ ನಂತರ ನನಗೆ ಹೊಳೆದ ಅನಿಸಿಕೆ ಇದು,  
ತೇಜಸ್ವಿಯವರು ಸಣ್ಣಕಥೆಗಳು ಎಷ್ಟು ಅಚ್ಚುಕಟ್ಟಾಗಿವೆಯೆಂದರೆ ಅವುಗಳಲ್ಲಿ ಬರುವ ಪ್ರತಿಯೊಂದು ಪಾತ್ರವೂ, ಸನ್ನಿವೇ಼ಶಗಳು, ವಾತಾವರಣಗಳು ನೈಜತೆಯಿಂದ ಕೂಡಿರುತ್ತದೆ. ಎಂದೂ ಕೋಪಗೊಳ್ಳದಿದ್ದವನು ಕಡೆಗೆ ಕೋಪದಿಂದ ಕೆಂಡವಾಗುವ ಪೋಸ್ಟಮಾಸ್ತರ ಬೋಬಣ್ಣ ;  ಅವನತಿ ಕಥೆಯ ಸೂರಾಚಾರಿ, ಗೌರಿ , ನಮ್ಮ ನಿಮ್ಮ ನಡುವೆ ಕಾಣುವ ಕೆಲವು ಜನರಂತೆ ದೊಡ್ಡ ಹುಡುಗನಾಗಿದ್ದರೂ ಇನ್ನೂ ಬುದ್ದಿಯಲ್ಲಿ ಮಾಗದ ವಿಶ್ವನಾಥ ; ಕುಬಿ ಮತ್ತು ಇಯಾಲ ಕಥೆಯಲ್ಲಿ ಡಾಕ್ಟರ್ ಕುಬಿ, ಇಯಾಲ ಪಾತ್ರಗಳ ಜೊತೆಗೆ ತನ್ನದೇ ಮಹತ್ವವನ್ನು ಹೊಂದಿರುವ ರಸ್ತೆಯಲ್ಲಿರುವ ಬಂಡೆ. ತುಕ್ಕೋಜಿ ಕಥೆಯಲ್ಲಿ ಹೇಗೆ ಒಂದು ಹಳ್ಳಿ ನಾಗರೀಕತೆಯ ವಿಕಾಸದ ಹೆಸರಿನಲ್ಲಿ ತನ್ನತನವನ್ನು ಕಳೆದುಕೊಂಡು ಪಟ್ಟಣವಾಗಿ ಮಾರ್ಪಡುತ್ತದೆ ಎಂಬುವುದನ್ನು ಮನದಟ್ಟು ಮಾಡುತ್ತಾರೆ ಹಾಗೆಯೇ ಅವಿವಾಹಿತ ಟೈಲರ್ ತುಕ್ಕೋಜಿಯ, ವಿವಾಹದ ನಂತರ ಮತ್ತು ಮಗುವಾದ ನಂತರದ ಅನುಭವಗಳು, ಅವನ ಉನ್ನತಿ , ಅವನತಿ,ಅವನ ಒತ್ತಡ, ಆತಂಕ  ಕಣ್ಣಿಗೆ ಕಟ್ಟುವಂತಿದೆ

ಡೇರ್ ಡೆವಿಲ್ ಮುಸ್ತಫಾ ಕಧೆಯಲ್ಲಿ ಮುಸ್ತಫಾನ ಕೈಚಳಕ, ಸಾಹಸಗಳು , ರಾಮಾನುಜನ ಜೊತೆ ನಡೆಯುವ ತಮಾಷೆ ರಂಜಿಸುತ್ತವೆ. ಕಥೆಯ ಕೊನೆಯಲ್ಲಿ ಲೇಖಕರು ಹೇಳುವ “ಆದರೆ ನಾವೆಲ್ಲ ಆಗಲೇ ಯೌವನದ ಹುಮ್ಮಸ್ಸಿನಲ್ಲಿ ಆ ಗಡಿಗಳೆನ್ನೆಲ್ಲಾ ಮೀರುತ್ತಾ ಬಹುದೂರ ಬಂದಿದ್ದೆವು” ಎನ್ನುವ ಮಾತು ಓದುಗರನ್ನೂ ಪ್ರಬುದ್ಧರನ್ನಾಗಿ ಮಾಡುತ್ತದೆ

ತಬರನ ಕಥೆ ಸ್ವಾತ್ರಂತ್ರ್ಯೋತ್ತರದ ಆಡಳಿತ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.


ತ್ಯಕ್ತ ಕಥೆಯಲ್ಲಿ ಕಥಾನಾಯಕನಷ್ಟೇ ಮುಖ್ಯವಾಗುವ ಕಿಟ್ಟಿ ಎನ್ನುವ ಹುಡುಗನ ಚೇಷ್ಟೆ, ಭಾವನೆ, ತಳಮಳಗಳು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತವೆ.

No comments: