Wednesday, November 18, 2015

“ನಿಮಗೆ ನನ್ನ ದ್ವೇಷ ದಕ್ಕುವುದಿಲ್ಲ” Letter from Paris

“ನಿಮಗೆ ನನ್ನ ದ್ವೇಷ ದಕ್ಕುವುದಿಲ್ಲ” ಎಂದು ಪ್ಯಾರಿಸ್ ನ ಆಂಟೋನ ಲೇಯಿರಿಸ್ ಕಳೆದ ವಾರದ ದಾಳಿಯಲ್ಲಿ ತನ್ನ ಹೆಂಡತಿಯನ್ನು ಕೊಂದ ಭಯೋತ್ಪಾದಕರನ್ನು ಉದ್ದೇಶಿಸಿ ಬರೆದಿದ್ದಾರೆ.

13ನೇ ನವಂಬರ್ 2015ರ ಶುಕ್ರವಾರ, ಆಂಟೋನ ಲೇಯಿರಿಸ್ನ ಪತ್ನಿಯು ಬಾಟಾಕ್ಲಾನ್ ರಂಗಮಂದಿರದಲ್ಲಿ ಸಂಗೀತ ಕಚೇರಿಯಲ್ಲ್ಲಿದ್ದಾಗ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡದಲ್ಲಿ ಇತರ 88 ಜನರ ಜೊತೆ ಬಲಿಯಾದರು.

“ಶುಕ್ರವಾರ ರಾತ್ರಿ ನೀವು ಒಂದು ಅಮೂಲ್ಯವಾದ ಜೀವವನ್ನು, ನನ್ನ ಜೀವನದ
ಪ್ರೀತಿಯನ್ನು, ನನ್ನ ಮಗನ ತಾಯಿಯನ್ನು ಕಳವು ಮಾಡಿದಿರಿ, ಆದರೆ ನಿಮಗೆ ನನ್ನಿಂದ ದ್ವೇಷ ದಕ್ಕಲಾರದು” ಎಂದು ಲೇಯಿರಿಸ್ರವರು ತಮ್ಮ ಫೇಸ್ ಬುಕ್ ನಲ್ಲಿ ಹೇಳಿದ್ದಾರೆ.  ತಮ್ಮ ಮನಮುಟ್ಟುವ ಮತ್ತು ಎದೆಗಾರಿಕೆಯ ನಿಲುಮೆಯಲ್ಲಿ , ಅವರು ತಮ್ಮ ಪತ್ನಿಯ ಬಗ್ಗೆ ಹೀಗೆ ಹೇಳುತ್ತಾರೆ: “ ಕಡೆಗೂ, ಹಲವು ರಾತ್ರಿ ಮತ್ತು ದಿನಗಳು ಕಾಯ್ದ ನಂತರ ಇಂದು ಬೆಳಿಗ್ಗೆ ನಾನವಳನ್ನ ನೋಡಿದೆ. ಅವಳು ಶುಕ್ರವಾರ ಸಂಜೆ ಹೊರಟಾಗ ಎಷ್ಟು ಸುಂದರವಾಗಿದ್ದಳೋ ಹಾಗೆಯೇ ಇದ್ದಳು, 12 ವರ್ಷಗಳ ಹಿಂದೆ ನಾ ಹುಚ್ಚನಂತೆ ಅವಳ ಪ್ರೀತಿಸತೊಡಗುವಾಗ ಎಷ್ಟು ಸುಂದರವಾಗಿದ್ದಳೋ ಹಾಗೆಯೇ ಇದ್ದಳು”

ಲೇಯಿರಿಸ್ ದಂಪತಿಗಳಿಗೆ 17 ತಿಂಗಳಿನ ಮಗನಿದ್ದಾನೆ.

“ನಾವಿಬ್ಬರೇ, ನನ್ನ ಮಗ ಮತ್ತು ನಾನು, ಆದರೆ ನಾವು ಜಗತ್ತಿನ ಎಲ್ಲಾ ಸೇನೆಗಳಿಗಿಂತ ಬಲಿಷ್ಠರು” ಎಂದು ಲೇಯಿರಿಸ್ ಹೇಳಿದ್ದಾರೆ. “ನೀವು ಯಾರು ಎಂದು ನನಗೆ ತಿಳಿದಿಲ್ಲ, ಆ ವಿಷಯ ನನಗೆ ಬೇಕಾಗಿಯೂ ಇಲ್ಲ. ದೇವರ ಪ್ರತಿರೂಪದಂತೆ ಇರುವ ನನ್ನವಳಿಗೆ ನೀವು ಮನಬಂದಂತೆ ಹಾರಿಸಿರುವ ಪ್ರತೀ ಗುಂಡು ದೇವರ ಹೃದಯಲ್ಲಿ ಗಾಯ ಮಾಡಿರುತ್ತದೆ.”

“ಇಲ್ಲ. ನಾನು ನಿಮಗೆ ನನ್ನ ದ್ವೇಷದ ಕೊಡುಗೆಯನ್ನು ಕೊಡಲಾರೆ. ನಿಜ ಹೇಳಬೇಕೆಂದರೆ ನಾನು ದುಃಖದಿಂದ ನುಚ್ಚುನೂರಾಗಿರುವೆ, ನಿಮಗೆ ಇದು ಸಂದ ಸಣ್ಣ ವಿಜಯವೆಂದು ನಾನು ಒಪ್ಪುತ್ತೇನೆ, ಆದರೆ ಇದು ಕೆಲವೇ ಸಮಯದ್ದು. ನನಗೆ ಗೊತ್ತು ನನ್ನವಳು ಪ್ರತೀದಿನ ನಮ್ಮೊಡನಿರುತ್ತಾಳೆ ಮತ್ತು ನೀವು ಮುಟ್ಟಲಾಗದ ನಮ್ಮೀ ಆತ್ಮಗಳ ಸ್ವರ್ಗದಲ್ಲಿ ನಾವಿರುತ್ತೇವೆ.

ಲೇಯಿರಿಸ್ ಭಯಬೀತರಾಗಲು ನಿರಾಕರಿಸುತ್ತಾ “ ನಿಮಗೆ ಹೆದರಬೇಕೆಂದು ನೀವು ಬಯಸುತ್ತೀರ. ನನ್ನ ಜೊತೆಯಲ್ಲಿರುವ ದೇಶವಾಸಿಗಳನ್ನು ಅನುಮಾನಾಸ್ಪದವಾಗಿ ನೋಡುವಂತೆ ಮಾಡಿ, ನಮ್ಮ ರಕ್ಷಣೆಗಾಗಿ ನಮ್ಮ ಸ್ವಾತಂತ್ರ್ಯವನ್ನು, ಸ್ವೇಚ್ಛೆಯನ್ನು ಬಲಿಕೊಡಬೇಕೆಂದು ಬಯಸುತ್ತಿದ್ದೀರ. ಇಲ್ಲ , ಈ ವಿಷಯದಲ್ಲಿ ನೀವು ಸೋತಿರುವಿರಿ. ನಾವು ನಾವಾಗಿಯೇ ಇರುತ್ತೇವೆ.”

ನನ್ನಲ್ಲಿ ನಿಮಗಾಗಿ ಸಮಯವಿಲ್ಲ ನಿದ್ದೆಯಿಂದ ಈಗಷ್ಟೇ ಏಳುತ್ತಿರುವ ನನ್ನ ಮಗ ಮೆಲ್ವಿನ್ನ ನ ಮೇಲೆ ಗಮನ ಹರಿಸಬೇಕಾಗಿದೆ “ನಾವು ಎಂದಿನಂತೆ ಆಟವಾಡುತ್ತೇವೆ. ಜೀವಮಾನದುದ್ದಕ್ಕೂ ನನ್ನ ಪುಟ್ಟ ಮಗ ನಿರ್ಭೀತಿಯಿಂದ ಸಂತೋಷವಾಗಿರುತ್ತಾನೆ, ಸ್ವತಂತ್ರವಾಗಿರುತ್ತಾನೆ. ಯಾಕೆಂದರೆ ಅವನ ದ್ವೇಷವೂ ನಿಮಗೆ ದಕ್ಕುವುದಿಲ್ಲ”

No comments: