Wednesday, June 17, 2015

ಮೂಳೆ ವ್ಯಾಪಾರಿ

ಮೂಳೆ ವ್ಯಾಪಾರಿ  ಮರಾಠಿ: ಶಂಕರ್ ರಾವ್ ಖರಾಟ್,
ತರಲ್-ಅಂತರಾಳ್ ನ ಒಂದು ಭಾಗ    
ಇಂಗ್ಲೀಷ್ ನಲ್ಲಿ : ಪ್ರಿಯಾ ಅದರ್ಕರ್

ನಾನು ಹಳ್ಳೀಲಿ ಶಾಲೆಗೆ ಹೋಗುತ್ತಿದ್ದಾಗ ಯಾವಾಗಲೂ ನನ್ನ ಹತ್ತಿರ ದುಡ್ಡುಕಡಿಮೆ ಇರ್ತಾ  ಇತ್ತು. ನನಗೆ ನಾಲ್ಕನೇ ತರಗತಿಯಿಂದ ತಿಂಗಳಿಗೆ ಒಂದು ರುಪಾಯಿ  ವಿದ್ಯಾರ್ಥಿ ವೇತನ ಬರ್ತಾಇತ್ತು. ಆದರೆ ಅದು ದಿನಾಲು ಉಪ್ಪು ಮೆಣಸಿಗೇ  ಖರ್ಚಾಗ್ತಾ  ಇತ್ತು. ಹಾಗಾಗಿ ನಾನು ಒಂದು ನಯಾ ಪೈಸೇನೂ ಉಳಿಸೊಕೆ ಆಗ್ತಾ ಇರಲಿಲ್ಲ. ಆಮೆಲೆ ನಾನು ಕಾಡಿಗೆ ಹೋಗಿ, ಗೋಂದು ಮರದಿಂದ ಗೋಂದು ತಂದು,ಅಂಗಡಿಯವರಿಗೆ ಮಾರ್ತಾ ಇದ್ದೆ. ಬೇಸಿಗೆಯಲ್ಲಿ ನಾನು ಕಾರಂಜ ಮರದಿಂದ ಹಣ್ಣುಗಳನ್ನು ಕಿತ್ತು ಮಾರುಕಟ್ಟೆಯಲ್ಲಿ ಮಾರ್ತಾ ಇದ್ದೆ ಅಧವಾ ಜೇನುಗೂಡನ್ನು ಕಿತ್ತು ಜೇನನ್ನು ಮಾರುತ್ತಿದ್ದೆ. ಕೆಲವು ಸಲ ಸ್ವಲ್ಪ ಹಣಕ್ಕೋಸ್ಕರ ದಿನಗೂಲಿಯಾಗಿ ಏನಾದರೊಂದು ಕೆಲಸ ಮಾಡುತ್ತಿದ್ದೆ . ಇಲ್ಲವಾದರೆ ನನ್ನ ಕೈಯ್ಯಲ್ಲಿ ಒಂದು ಪೈಸಾನೂ ಇರ್ತಾ ಇರಲಿಲ್ಲ.

ಮಧ್ಯಾಹ್ನದ ಊಟದ ನಂತರ, ನಾನು ಮಹರವಾಡಾದ ಹರಟೆ ಹೊಡಿಯೋ ಜಾಗವಾಗಿರುವ ಅರಳಿಕಟ್ಟೆಗೆ ಹೋಗಿ , ಅರಳಿಮರದ ಕೆಳಗಿರುವ ಕಟ್ಟೆ ಮೇಲೆ ಕೂತೆ.11 ಗಂಟೆ ಕಳೆದಿತ್ತು, ತುಂಬಾ ಬಿಸಿಲಿತ್ತು. ಹತ್ತಿರದಲ್ಲೇ ಇರುವ ಬೇವಿನ ಮರದ ನೆರಳಿನಲ್ಲಿ ನನ್ನ ಸಹಪಾಠಿಗಳು ಗೋಲಿ ಆಟ ಆಡ್ತಾ ಇದ್ದರು. 'ಮೂಳೆಯವನು ಬಂದಾ ! ಮೂಳೆಯವನು ಬಂದಾ!' ಈ ಶಬ್ಧ ಕೇಳಿದೊಡನೇ ಎಲ್ಲಾರೂ ಸುತ್ತಾ ಮತ್ತಾ ಚುರುಕಾಗಿ ನೋಡೋಕೆ ಶುರು ಮಾಡಿದರು. ನಾನೂ ಈ ಕಡೆಯಿಂದ ಆ ಕಡೆ ನೋಡಿದೆ. ಆಷ್ಟರಲ್ಲಿ ಮಹರ್ ಮತ್ತು ಮಾಂಗ್ ಜಾತಿಯ ಮಕ್ಕಳು ಕಟ್ಟೆಯ ಹತ್ತಿರ ಹೊಳೆಯ ದಡದಲ್ಲಿ ಮೂಳೆಗಳನ್ನ ಹುಡುಕೋಕೆ ಶುರು ಮಾಡಿದರು. ಅಲ್ಲಿಯೇ ಅಕ್ಕಪಕ್ಕ ಓಡಾಡಿಕೊಂಡು ತಮಗೆ ಸಿಕ್ಕಷ್ಟು ಮೂಳೆಗಳನ್ನ ಎತ್ತಿಕೊಳ್ಳುತ್ತಾ ಇದ್ದರು. ನಾನು ಜಾಗೃತನಾದೆ ಹಾಗೆಯೇ ನನ್ನ ಸಹಪಾಠಿಗಳೂ ಕೂಡ.

ಮೂಳೆ ವ್ಯಾಪಾರಿ ನಮ್ಮ ಹಳ್ಳಿಗೆ ಸತ್ತ ಪ್ರಾಣಿಗಳ ಮೂಳೆಗಳನ್ನ ಖರಿದಿಸೋಕೆ ಬರ್ತಿದ್ದ.  ಕಟ್ಟೆಯ ಹತ್ತಿರದ ನಿಂಬೆ ಮರದ ಕೆಳಗೆ ನಿಲ್ಲುತ್ತಿದ್ದ. ನೀವು ಅಲ್ಲಿಂದಿಲ್ಲಿಂದ ಮೂಳೆಗಳನ್ನುಹೆಕ್ಕಿ ಒಂದು ಚೀಲದ ತುಂಬಾ ತಂದುಕೊಟ್ಟರೆ ಅವನು ತೂಕ ಮಾಡಿ ಕೆಲವು ಕಾಸುಗಳನ್ನು ಕೊಡುತ್ತಿದ್ದ. ಆದರೆ ಆ ಕಾಲಕ್ಕೆ ಆ ನಾಣ್ಯಗಳೇ ತುಂಬಾ ದೊಡ್ಡದಾಗಿತ್ತು. ಮೂಳೆ ವ್ಯಾಪಾರಿಯೂ ವ್ಯವಹಾರದಲ್ಲಿ ಪ್ರಾಮಾಣಿಕವಾಗಿದ್ದ. ಅವನು ಮೂಳೆಗಳನ್ನು ತೂಕ ಮಾಡಿ ಕೂಡಲೇ ಹಣವನ್ನು ಕೊಟ್ಟುಬಿಡುತ್ತಿದ್ದ. ಮಹರ್ ಮತ್ತು ಮಾಂಗ್ ಜಾತಿಯ ಗಂಡಸರು, ಹೆಂಗಸರು ಮತ್ತು ಮಕ್ಕಳು"ಮೂಳೆಯವನು ಬಂದಾ" ಅನ್ನೋ ಶಬ್ದ ಕೇಳಿದ ಕೂಡಲೇ ಮಾರೋದಕ್ಕೆ ಎದ್ದೂ ಬಿದ್ದೂ ಮೂಳೆಗಳನ್ನ ಹುಡುಕೋಕೆ ಶುರು ಮಾಡ್ತಾ ಇದ್ರು. ನನ್ನ ಹಳ್ಳಿಯಲ್ಲಿರುವ ಮಹರ್ ಗಳು ಸತ್ತ ಪ್ರಾಣಿಗಳ ಮಾಂಸ ತಿನ್ನುವುದನ್ನ ನಿಲ್ಲಿಸಿಬಿಟ್ಟಿದ್ದರು. ಆದ್ದರಿಂದ ಸತ್ತ ಪ್ರಾಣಿಗಳ ಅಸ್ಥಿಪಂಜರಗಳನ್ನು ಹೊಳೆಯ ಬದಿಯಲ್ಲೇ ಬಿಸಾಡಿರುತ್ತಿದ್ದರು. ಯಾವಾಗಲಾದರೊಮ್ಮೆ ಮೂಳೆ ವ್ಯಾಪಾರಿ ಬಂದಾಗ,ಮೂಳೆಗಳನ್ನ ಹುಡುಕೋಕೆ ಶುರು ಮಾಡ್ತಾ ಇದ್ರು. ಇದರ ಅರಿವಿರುವ ಕೆಲವು ವಯಸ್ಸಾದ ಮಹರ್ ಗಳು ಮೂಳೆಗಳನ್ನು ಮೊದಲೇ ತಂದು ತಮ್ಮ ಮನೆಯ ಹಿತ್ತಲಿನಲ್ಲಿ ಶೇಖರಿಸಿ ಇಡುತ್ತಿದ್ದರು. ಈ ರೀತಿ ಸಂದರ್ಭ ಬಂದಾಗ ಅವುಗಳನ್ನು ಮಾರುತ್ತಿದ್ದರು. ಆವರಿಗೆ ಏನಿಲ್ಲವೆಂದರೂ ಒಂದು ಅಥವಾ ಎರಡು ರೂಪಾಯಿಗಳು ಸಿಗುತ್ತಿದ್ದು ಅವು ಒಂದು ವಾರಕ್ಕೆ ಸಾಕಾಗುತ್ತಿತ್ತು.

ಮೂಳೆ ವ್ಯಾಪಾರಿಯ ಕೂಗು ಕೇಳಿ ನನ್ನ ಆಸೆ ಗರಿಗೆದರಿತು . ದಗಡೂ ಮತ್ತು ನಾನು ಮೂಳೆ ಹುಡುಕಲು ಕೂಡಲೇ ಹೊರಟೆವು. ಹೊಳೆಯ ದಡದಲ್ಲಿರುವ ಮೂಳೆಗಳನ್ನು ತರೋಣವೆಂದು ನಿರ್ದರಿಸಿದ್ದೆವು. ನಾವು ಹೊರಡುವಾಗ, ಮುದಿಯ ಸಾವಳನು "ಓಯ್ ! ನನ್ನ ಹಿತ್ತಲತ್ರ ಹೋಗ್ ಬೇಡಿ! ನಾ ಗುಡ್ಡೇ ಮಾಡಿರೋ ಮೂಳೆಗಳನ್ನ ತಗೋಬೇಡಿ. ನನಗೆ ಗೊತ್ತಿದೆ, ಯಾವ ಮೂಳೆಗಳು ನಂದು ಅಂತ" ಸಾವಳ ಮಹರ್ ನಿಜಾನೇ ಹೇಳಿದ್ದ. ಅವನ ಹಿತ್ತಲಲ್ಲಿ ಮೂಳೆಗಳ ಗುಡ್ಡೆಯೇ ಇತ್ತು. ಕೆಲವು ಸಾರಿ ಕಾಗೆಗಳು ಹೊಸ ಮೂಳೆಗಳ ಮೇಲೆ ಕೂತು ಅದರಲ್ಲುಳಿದುರಿವ ಮಾಂಸವನ್ನು ಕೊಕ್ಕಿ ತಿನ್ನುತ್ತಿದ್ದವು. ಹದ್ದುಗಳು ಅವುಗಳ ಮೇಲೆ ಹಾರಾಡುತ್ತಿದ್ದವು. ಕೆಲವು ಸಾರಿ ಕೊಳೆತ ಮೂಳೆಗಳಿಂದ ಕೆಟ್ಟ ವಾಸನೆ ಬರುತ್ತಿತ್ತು. ಅದರ ಮುಂದೆ ಸಾಗುವವರು ಮೂಗನ್ನು ಮುಚ್ಚಿಕೊಂಡು ನಡೆಯುತ್ತಿದ್ದರು.. ಬಿಸಿಲಿಗೆ ಮೂಳೆಗಳು ಒಣಗುತ್ತಿದ್ದವು, ಹಾಗೆ ಒಣಗಿದ ನಂತರ, ವಾಸನೆ ಹೋಗಿಬಿಡುತ್ತಿತ್ತು. ಕೆಲವು ಸಲ ಹಸಿದ ಬೀದಿ ನಾಯಿಯೊಂದು ಬಂದು ಅಲ್ಲಿಯೇ ಕುಳಿತು,ಮೂಳೆಗಳನ್ನು ಖುಷಿಯಾಗಿ ಅಗಿದುಕೊಂಡಿರುತಿತ್ತು.

ಸಾವಳ ಮಹರನು ಯಾವಾಗಲೂ ಮೂಳೆಗಳ ಹುಡುಕಾಟದಲ್ಲೇ ಇರುತ್ತಿದ್ದ. ಯಾವುದಾದರೂ ಸಿಕ್ಕಿದಾಗ ಅವುಗಳನ್ನು ಮನೆಯ ಹಿತ್ತಲಿನಲ್ಲಿ ಶೇಖರಿಸಿ ಇಡುತ್ತಿದ್ದ. ಶಿವ ಮಹರನೂ ಅದೇ ರೀತಿ ಮಾಡುತ್ತಿದ್ದ. ಮೂಳೆಗಳು ರಾಶಿಯಾಗಿ ಇವರುಗಳ ಹಿತ್ತಲಿನಲ್ಲಿ ಇರುತ್ತಿತ್ತು. ಸಾವಳನಿಗೆ ಇದೇ ಕೆಲಸವಾಗಿತ್ತು. ಕೆಲವು ತಿಂಗಳಿಗೊಮ್ಮೆ ಬರುವ ಮೂಳೆ ವ್ಯಾಪಾರಿಯಿಂದ ಎರಡು ಅಥವಾ ಮೂರು ಚೀಲಗಳಷ್ಟು ಮೂಳೆಗಳಿಗೆ ಎರಡು ರುಪಾಯಿಗಳು ಸಿಗುತ್ತಿತ್ತು. ಇದು ಬಹಳ ಸುಲಭವಾದ ಸಂಪಾದನೆಯಾಗಿತ್ತು. ಆ ಎರಡು ರುಪಾಯಿಗಳಿಂದ ಅವನು ಒಂದು ಹೊಸ ಶರ್ಟು ಮತ್ತು ಒಂದು ಲುಂಗಿಯನ್ನ ಕೊಳ್ಳುತ್ತಿದ್ದ. ಅವನು ಹಾಕಿಕೊಂಡಿರುತ್ತಿದ್ದ ಚಿಂದಿಯಾದ ಬಟ್ಟೆಗಳನ್ನು ಬಿಸಾಡುತ್ತಿದ್ದ. ಮೂಳೆ ವ್ಯಾಪಾರಿ ಭೇಟಿ ಅವನಿಗೆ ಹೊಸ ಬಟ್ಟೆಗಳನ್ನು ದೊರಕಿಸುತ್ತಿತ್ತು . ಆದ್ದರಿಂದ ಅವನು ಮೂಳೆಗಳನ್ನು ಶೇಖರಿಸುತ್ತಿದ್ದದ್ದು ಮತ್ತು ನಾವು ಅವನ ಮನೆಯ ಬಳಿ ಹೋಗುವಾಗ ನಮಗೆ ಮೂಳೆಗಳ ಗುಡ್ಡೆಯ ಬಳಿ ಹೋಗಬಾರದೆಂದು ಎಚ್ಚರಿಕೆ ಕೊಟ್ಟಿದ್ದು.

ಮೂಳೆ ವ್ಯಾಪಾರಿ ಬಂದ ಸುದ್ದಿ ಕೇಳಿದ ತಕ್ಷಣ ಸಾವಲ ಮತ್ತು ಶಿವನ ಮುಖಗಳು ಹೊಳೆಯತೊಡಗಿದವು. ಸಾವಲ ಬೇಗನೇ ಮೆಟ್ಟಲುಗಳನ್ನಿಳಿದು ಅವನ ಮನೆಯ ಕಡೆಗೆ ವಾಸನೆ ಸಿಕ್ಕ ಬೇಟೆ ನಾಯಿಯಂತೆ ಓಡಿದ . ಶಿವ ಮಹರನು, ನಗುಮುಖದೊಡನೆ, ಅವನ ಮನೆಯ ಕಡೆಗೆ ಬಿರಬಿರನೆ ನಡೆದ

ಪಾಂಡ ಮತ್ತು ನಾನು ಮಹರವಾಡಾದ ಗಲ್ಲಿಗಳಲ್ಲಿ ಓಡಿದೆವು. . ಆದರೆ ನಮ್ಮ ಎದುರಿನಿಂದ ಕೆಲವು ಹೆಂಗಸರೂ ಮತ್ತು ಮಕ್ಕಳು ಬುಟ್ಟಿಗಳ ತುಂಬಾ ಮೂಳೆಗಳನ್ನು ಹೊತ್ತು ತರುತ್ತಿದ್ದರು. ಈಗ ಮಹರವಾಡಾದಲ್ಲಿ ಯಾವುದೇ ಮೂಳೆಗಳಿಗೆ ಕೈ ಹಾಕುವುದು ಕಷ್ಟ ಎಂದು ಅರಿವಾಯಿತು. ಆದ್ದರಿಂದ ದಗಡು ಜೊತೆ ನಾನು ಹೊಳೆಯ ಕಡೆಗೆ ಓಡಿದೆ.   ನಾನು ಮೇಕೆಗಳನ್ನುಮೇಯಿಸಲು ಕರೆದುಕೊಂಡು ಹೋಗುವುದರಿಂದ ಅಲ್ಲಿ ಮೂಳೆಗಳು ಇರುವುದೆಂದು ಗೊತ್ತಿತ್ತು. ಹಾಗೆಯೇ ಹೋಗುತ್ತಿದ್ದಾಗ, ಪಾಂಡಾ ಹೇಳಿದ
"ಶಂಕರ್ ! ಅಲ್ಲಿ ಇಳಿಜಾರಿನಲ್ಲಿ ಒಂದು ಅಸ್ಥಿಪಂಜರ ಇದೆ!"
"ಹೌದು. ನನಗೆ ಗೊತ್ತು!" ಎಂದು ನಾನು ಹೇಳಿದೆ ಆಮೇಲೆ "ಕಾರಂಜ ಮರದ ಹತ್ತಿರ ಒಂದು ಎಮ್ಮೆ ಅಸ್ಥಿಪಂಜರ ಇದೆ"
 ಎಂದು ಮತ್ತಷ್ಟು ಮಾಹಿತಿ ನೀಡಿದೆ.
"ಅದರ ಬಗ್ಗೆ ನನಗೆ ಗೊತ್ತಿಲ್ಲ"
ಆದರೆ ನನಗೆ ಗೊತ್ತಿತ್ತು.
"ಪಾಂಡಾ! ಸ್ಮಶಾನದಲ್ಲೂ ಕೆಲವು ಅಸ್ಥಿಪಂಜರಗಳನ್ನ ನೋಡಿದೆ!"
ಅವನಿಗೆ ಅನುಮಾನಿಸಿದ "ಯಾರ ಅಸ್ಥಿಪಂಜರ? ಪ್ರಾಣಿಗಳದೋ ಅಥವಾ ಸತ್ತ ಮನುಷ್ಯರದೋ?"
"ಯಾರಿಗ್ಗೊತ್ತು?"ಎಂದು ಉತ್ತರಿಸಿದೆ "ಆದರೆ ಅಲ್ಲಿ ಸ್ಮಶಾನದಲ್ಲಿ ಸುಮಾರು ಮೂಳೆಗಳಿವೆ"
"ಅವುಗಳು ಮನುಷ್ಯರದೇ ಇರಬೇಕು"
"ಅದ್ರೇನು? ಮೂಳೆಗಳು ಮೂಳೆಗಳೇ. ನಮಗೆ ಕಾಸು ಸಿಕ್ಕಿದ್ರೆ ಸಾಕು "
"ಹೌದು"ಎಂದು ಒಪ್ಪಿಕೊಂಡಪಾಂಡ

ನಮ್ಮ ಹಿಂದೆ ದಗಡುವು ಕೂಡ ಓಡಿಕೊಂಡುಬಂದನು.
"ತಾಳಿ, ನಾನೂ ನಿಮ್ಮ ಜೊತೆಬರ್ತೀನಿ" ಎಂದು ಹೇಳಿ ನಮ್ಮ ಹತ್ತಿರ ಬಂದ "ಹೇ ನಾವು ಮೂವರು ಸೇರಿ ಹುಡುಕೋಣ" ಎಂದ
ನಾ ಸುಮ್ಮನಾದೆ
ಆದರೆ ಪಾಂಡ ಒಪ್ಪಿಕೊಂಡುಬಿಟ್ಟ "ಸರಿ! ನಾವೆಲ್ಲ ಜೊತೆಯಾಗೇ ಹುಡುಕಿ ಸೇರಿಸೋಣ" ಅಂದ. ಅದಕ್ಕೆ ನಾನೂ ತಲೆ ಆಡಿಸಿದೆ."ಸರಿ. ಮೂವರು ಅಂದ್ರೆ ಮೂವರು" ಕೂಡಲೆ ನಾವು ಹೊಳೆಯ ಹತ್ತಿರ ಓಡಿ ಹೋಗಿ ಇಳಿಜಾರಿನ ಹತ್ತಿರ ಇದ್ದ ಮೂಳೆಗಳನ್ನು ಹೆಕ್ಕಲು ಶುರು ಮಾಡಿದೆವು. ನಾವು ಮೂಳೆ ಕಲೆ ಹಾಕುತ್ತಿರುವದನ್ನು ನೋಡಿ ಕಾಗೆಗಳು ನಮ್ಮ ಬೆನ್ನು ಹತ್ತಿದವು ಮತ್ತು ಹದ್ದುಗಳು ನಮ್ಮ ತಲೆಗಳ ಮೇಲೆ ಸುತ್ತುತ್ತಾ ಹಾರಾಡತೊಡಗಿದವು. ಹದ್ದು ಮತ್ತು ಕಾಗೆಗಳು ನಮ್ಮ ಮೇಲೆಯೇ ಸುತ್ತು ಹಾಕಿ ಹಾರಾಡುತ್ತಿರುವುದನ್ನುನೋಡಿ ನಾಯಿಗಳು ನಮ್ಮ ಹಿಂದೆಯೇ ಬಂದವು. ಮೂಳೆಗಳ ವಾಸನೆ ಅವುಗಳ ಮೂಗಿನ ಹೊಳ್ಳೆಗಳನ್ನು ಹೊಕ್ಕಿದ್ದವು.

ನಾವು ಮೂಳೆಗಳನ್ನು ಹುಡುಕುವುದರಲ್ಲಿ,ಆರಿಸಿವುದರಲ್ಲಿ ತಲ್ಲೀನರಾಗಿದ್ದೆವು. ಅನಿರಿಕ್ಷಿತವಾಗಿ ಒಂದು ಹದ್ದು ನನ್ನ ಕೈಯಲ್ಲಿದ್ದ ಮೂಳೆಯನ್ನು ಕಿತ್ತುಕೊಳ್ಳಲು ತೀರ ಕೆಳಗೆ ಹಾರಿತು. ಅದರ ಉಗುರುಗಳು ನನ್ನ ಕೈಯನ್ನು ಇರಿದು ಅಲ್ಲಿ ಸ್ವಲ್ಪ ರಕ್ತಬಂದಿತು. ನಾನು ಅದನ್ನು ಒರೆಸಿ, ಮೂಳೆಗಳನ್ಜು ಕಲೆಹಾಕುವುದನ್ನು ಮುಂದುವರೆಸಿದೆ. ನಾವು ಮೂವರು ತುಂಬಾ ಮೂಳೆಗಳನ್ನು ಸಂಗ್ರಹಿಸಿದೆವು.
ದಗಡು ಹೇಳಿದ "ಶಂಕರ್!ಈ ಮೂಳಗೆಗಳನ್ನು ಒಟ್ಟಿಗೆ ಸೇರಿಸಿ ಕಟ್ಟಿ ಒಂದು ಹೊರೆ ಮಾಡಿ ನನ್ನ ತಲೆ ಮೇಲೆ ಇಡು. ನಾನು ಎತ್ತಿಕೊಂಡುಓಡಿ ಮೂಳೆಯವನ ಹತ್ತಿರ ಹೋಗ್ತೀನಿ" ಎಂದ. ಅದು ಒಳ್ಳೆಯ ಆಲೋಚನೆಯಾಗಿತ್ತು. ನಾವು ಆರಿಸಿದ ಮೂಳೆಗಳನ್ನು ಒಟ್ಟಾಗಿ ಸೇರಿಸಿ ಆ ಹೊರೆಯನ್ನು ದಗಡು ತಲೆಯ ಮೇಲೆ ಇಟ್ಟೆವು. ಅವನು ಹೊಳೆಯ ಬದಿಯಲ್ಲಿ ನಡೆದು ಮೂಳೆಯವನು ಕೂತಿದ್ದ ಸ್ಥಳಕ್ಕೆ ಹೊರಟನು.ಆಮೇಲೆ ನಾನು ಮತ್ತು ಪಾಂಡ ಹೋಳೆಯ ಮೇಲುದಂಡೆಯ ಕಡೆಗೆ ಧಾವಿಸಿದೆವು. ನಾವು ಹೋಗುವ ದಿಕ್ಕಿನಲ್ಲೇ ನಮಗಿಂತ ಮೊದಲು ದಾಮಾ ಬಿರಬಿರನೆ ನಡೆಯುತ್ತಿದ್ದನು. ಅವನ ದೃಷ್ಟಿ ಹೊಳೆಯ ದಂಡೆಯ ಮೇಲೆಯೇ ನೆಟ್ಟಿತ್ತು. ನಾವು ಅವನಿಗಿಂತ ಚಿಕ್ಕವರು ಮತ್ತು ಬಲವುಳ್ಳವರಾಗಿದ್ದೆವು, ಅವನನ್ನು ಹಿಂದಿಕ್ಕಿ ಮರಳಿನಲ್ಲಿ ಕುರಿಮರಿಗಳು ನುಗ್ಗುವ ಹಾಗೆ ಮುಂದೆ ಹೋದೆವು. ನಮಗೆ ಅವನೇನು ಯೋಚಿಸುತ್ತಿರಬಹುದೆಂಬ ಕಲ್ಪನೆಯೇ ಇರಲಿಲ್ಲ. ನಾವು ಓಡಿ ಓಡಿ ಅವನನ್ನು ಬಹಳ ದೂರ ಹಿಂದಿಕ್ಕಿದ್ದೆವು. ನಾವು ಓಡಿ ಹೋಗಿ ಒಂದು ದೊಡ್ಡ ಎತ್ತಿನ ಅಸ್ಥಿಪಂಜರವನ್ನು ಹಿಡಿದುಕೊಂಡೆವು. ಅದನ್ನು ನೋಡಿ ನನಗೆ ಬಹಳ ಖುಷಿಯಾಯ್ತು . ಅನಿರೀಕ್ಷಿತ ಗಾಳಿ ಬೀಸಿದ್ದರಿಂದ ಕೆಲವು ನೀಲಿ ನೇರಳೆಯ ಕಾರಂಜ ಮರದ ಮೊಗ್ಗುಗಳು ನನ್ನ ಮೇಲೂ ಮತ್ತು ಕೆಲವು ಅಸ್ಥಿಪಂಜರದ ಮೇಲೂ ಬಿದ್ದವು. ಅಸ್ಥಿಪಂಜರವು ನನ್ನೆಡೆಗೆ ಹಲ್ಲುಗಿಂಜಿದಂತೆ ಭಾಸವಾಯಿತು. . ಅದರ ಕಣ್ಣು ಗುಂಡಿಗಳುಖಾಲಿಯಾಗಿದ್ದವು. ಪಕ್ಕೆಲುಬುಗಳು ಮತ್ತು ಕೊಂಬುಗಳು ಚೆನ್ನಾಗಿದ್ದವು. ನಮಗೆ ತುಂಬಾ ಖುಷಿಯಾಯಿತು. ಮೂಳೆ ವ್ಯಾಪಾರಿ ಇದಕ್ಕೆ ಸುಮಾರು ಕಾಸು ಕೊಬಹುದು ಅಂತ. ನಾನು ಹಿಂದಿನ ಪಕ್ಕೆಲುಬುಗಳನ್ನು ಹಿಡಿದೆ. ಪಾಂಡ ಕೊಂಬುಗಳನ್ನುಹಿಡಿದುಕೊಂಡ. ನಾವು ಎತ್ತುವಿನ ಅಸ್ಥಿಪಂಜರವನ್ನು ತೊಟ್ಟಿಲಿನಂತೆ ಹಿಡಿದು ಆಡಿಸತೊಡಗಿದೆವು. ಕೂಡಲೇ ದಾಮಾ ಮಹರನು ನಮ್ಮೆಡೆಗೆ ಧಾವಿಸಿ ಬಂದು ಉರಿಗಣ್ಣಿನಿಂದ ನೋಡುತ್ತಾ "ಬೋಳಿ ಮಕ್ಳ ! ಅದು ನನ್ನಅಸ್ಥಿಪಂಜರ. ಎಲ್ಲಿಗೆ ತಗೊಂಡ್ ಹೋಗ್ತಾ ಇದ್ದೀರ ? ನಾನು ನೀವು ತಗೊಂಡ್ ಹೋಗೋಕ್ಕೆ ಬಿಡಲ್ಲ" ಅಂತ ಬೈದನು.

ನಾವು ಇಕ್ಕಟ್ಟಿನಲ್ಲಿ ಸಿಲುಕಿದೆವು.

"ಆದರೆ ನಾವೇ ಇದನ್ನು ಮೊದಲುನೋಡಿದ್ದು" ಎಂದೆ
"ಮುಠ್ಠಳರಾ ! ಅದು ನಿಮ್ಮಪ್ಪನ ಆಸ್ತೀನಾ? "
"ಇನ್ನೇನು ನಿನ್ನ ಆಸ್ತೀನಾ? " ನಾನೂ ಕೋಪದಿಂದ ಹೇಳಿದೆ
ಕೂಡಲೇ ದಾಮು " ನನ್ನ ಆಸ್ತಿಅಲ್ಲ. ಆದ್ರೇ ಮಹರ್ ಆಗಿರೋದ್ರಿಂದ ಅದು ನನ್ನ ಪಾಲಿನ ಸ್ವತ್ತು" ಅಂದ. "ಎತ್ತು ಸತ್ತಾಗ ನಾನೇ ಇಲ್ಲಿಗೆ ಎಳೆದು ತಂದು ಹಾಕಿದ್ದು. ನೀವು ಅಂದ್ಕೋಬಿಟ್ರಿ ತುಂಬಾ ಸುಲಭವಾಗಿ ಸಿಕ್ತೂ ಅಂತ , ಅಲ್ವಾ ? "

ಅವನು ಇನ್ನೂ ಹತ್ತಿರ ಬಂದು ಅಸ್ಥಿಪಂಜರದ ಮುಂದಿನ ಎರಡು ಕಾಲುಗಳನ್ನು ಹಿಡಿದುಕೊಂಡು ಎಳೆಯಲು ಶುರು ಮಾಡಿದ. ನಾವು ಇನ್ನೂ ಜೋರಾಗಿ ಎಳೆಯತೊಡಗಿದೆವು. ನಮ್ಮ ಜಗ್ಗಾಟ ಜಗಳವಾಗಿ ಬದಲಾಯಿತು.ನಾವು ಎಳೆದಾಗ, ಅವನು ನಮಗೆ ಹೊಡೆಯಲು ಬಂದನು. ಆದರೆ ನಾವು ಇನ್ನೂ ಚುರುಕು, ಸುಮ್ಮನೆ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಅಷ್ಟರಲ್ಲಿ, ಅಲ್ಲಿಗೆ ನಮ್ಮ ಮಹರವಾಡಾದ ಗಲ್ಪ ತನ್ನ ಹೊಲದ ಕಡೆಯಿಂದ ಬರುತ್ತಿದ್ದ . ನಮ್ಮ ಗಲಾಟೆಯನ್ನು ನೋಡಿ ಹತ್ತಿರ ಬಂದು ಕೇಳಿದ "ಯಾಕೆ ನಾಯಿಗಳ ತರ ಮೂಳೆಗಳಿಗೋಸ್ಕರ ಕಿತ್ತಾಡ್ತಾ ಇದ್ದೀರಾ ? " "ದಾಮಾ ! ನೀನೂ, ಮೂಳೆಗಳಿಗೋಸ್ಕರ ಮಕ್ಕಳ ತರಾನೇ ಆಡ್ತಾ ಇದ್ದೀಯ! "
"ಆದರೆಅಸ್ಥಿಪಂಜರ ನಂದು"ಎಂದ ದಾಮ
"ಅದೇನ್ ನಿಮ್ಮಪ್ಪಂದಾ?"
"ಇಲ್ಲ, ಆದ್ರೆ ಎತ್ತಿನ ಹೆಣ ನನ್ನ ಆಸ್ತಿ"
"ಹಾಗಿದ್ರೆ , ನೀನು ಮೊದಲೇ ಮೂಳೆಗಳನ್ನ ತೆಗೆದು ಇಟ್ಟುಕೊಳ್ಳಬೇಕಾತ್ತು"
"ಅದು ನಿಜಾನೇ, ಆದ್ರೇ...."
"ಆದ್ರೆ ನಿನಗೆ ಈಗಲೇ ಯಾಕೆಬೇಕು?"
ದಾಮ ಅವನಿಗೆ ನಿಜ ಹೇಳಿದ "ಮೂಳೆಯವನು ಮಹರವಾಡಕ್ಕೆ ಬಂದಿದ್ದಾನೆ, ಅದಕ್ಕೆ "
"ಓ ! ಮೂಳೆಯವನು ಬಂದಿದ್ದಾನಾ!"
"ಹೌದು! ಬಂದಿದ್ದಾನೆ"
"ಹಾಗಾದ್ರೆ ನಿಮ್ಮೊಳಗೇ ಹಂಚಿಕೊಳ್ಳಿ. ಆ ಹುಡುಗರಿಗೂ ಸ್ವಲ್ಪ ಕಾಸು ಸಿಗಲಿ" ಎಂದು ರಾಜಿ ಮಾಡಿಸಿದ
ಆಮೇಲೆ "ಹುಡುಗ್ರಾ ! ಈ ಮೂಳೆಗಳನ್ನ ದಾಮನೊಟ್ಟಿಗೆ ಹಂಚಿಕೊಳ್ಳಿ, ಅರ್ಧ ಅವನಿಗೆ, ಅರ್ಧ ನಿಮಗೆ. ಆವನಿಗೂ ಮನೆ ಖರ್ಚಿಗೆ ನಾಲ್ಕಾರು ಆಣೆಗಳು ಸಿಗ್ಲಿ"
ನಾವು ಒಪ್ಪಿಕೊಂಡೆವು.

ದಾಮಾ ಮುಂದುವರಿದು ಒಂದು ಕಾಲನ್ನು ಎಲುಬುಗೂಡಿನ ಬೆನ್ನ ಮೇಲೆ ಇಟ್ಟ. ಒಣಗಿದ ಕಟ್ಟಿಗೆಯಂತೆ ಮೂಳೆ ಮುರಿಯಿತು. ನಂತರ ನಾವು ಕೊಂಬುಗಳನ್ನು ಹಿಡಿದು ಎಳೆದಾಡತೊಡಗಿದೆವು. ಕಡೆಗೆ ದಾಮನಿಗೆ ಮೇಲಿನಅರ್ಧ ಭಾಗ ಕೊಂಬಿನ ಸಮೇತ ಸಿಕ್ಕಿತು. ನಮಗೆ ಕೆಳಗಿನ ಅರ್ಧ ಭಾಗ ಸಿಕ್ಕಿತು. ದಾಮ ಅವನ ಪಾಲಿನ ಅರ್ಧ ಅಸ್ಥಿಪಂಜರವನ್ನು ತಲೆಯ ಮೇಲೆ ಹೊತ್ತುಕೊಂಡುನಡೆಯತೊಡಗಿದ. ಅವನ ಚರ್ಮ ಕಪ್ಪಗಿತ್ತು; ಬಿಸಿಲಿನಲ್ಲಿ ಕೊಂಬು ಇರುವ ಅಸ್ಥಿಪಂಜರವನ್ನು ತಲೆಯ ಮೇಲೆ ಹೊತ್ತುಕೊಂಡು ನಡೆಯುವುದನ್ನ ನೋಡುತ್ತಿದ್ದರೆ, ಯಾವುದೋ ರಾಕ್ಷಸನಂತೆ ಕಾಣುತ್ತಿದ್ದನು. ಅವನು ನಡಿಗೆಯ ರೀತಿ ಕೂಡ ಅದೇ ರೀತಿಯಾಗಿತ್ತು.

ನಮ್ಮ ಹೊರೆ ಕಡಿಮೆಯಾಗಿತ್ತು. ದಾಮ ನಮ್ಮ ಬಳಿ ಇದ್ದದ್ದರಲ್ಲಿ ಅರ್ಧ ಭಾಗವನ್ನು ತೆಗೆದುಕೊಂಡುಬಿಟ್ಟಿದ್ದ. ನಾನು ಪಾಂಡನಿಗೆ ಹೇಳಿದೆ "ಪಾಂಡ! ನೀನು ಇದನ್ನ ಹೊತ್ತುಕೊಂಡು ಹೋಗು! ನಾನು ಇನ್ನೂ ಮೂಳೆಗಳು ಸಿಗುತ್ತಾ ಅಂತ ಸ್ಮಶಾನದ ಹತ್ತಿರ ಹೋಗಿ ತಗೊಂಡು ಬರ್ತೀನಿ "

ಪಾಂಡ ತಲೆ ಅಲ್ಲಾಡಿಸಿದ. ಅವನುಉಳಿದ ಅಸ್ಥಿಪಂಜರದ ಭಾಗವನ್ನು ತಲೆಯ ಮೇಲೆ ಹೊತ್ತುಕೊಂಡು ಮಹರವಾಡಾದ ಕಡೆಗೆ ನಡೆದ. ನಾನು ಮೂಳೆಗಳ ಸಿಗಬಹುದು ಎಂದು ಸ್ಮಶಾನದೆಡೆಗೆ ನಡೆದೆ. ಅಲ್ಲಿ ಎಲ್ಲಾ ಕಡೆಯೂ ಗೋರಿಗಳಿದ್ದವು. ದೊಡ್ಡ ದೊಡ್ಡ ಚಪ್ಪಡಿಕಲ್ಲುಗಳನ್ನು ಪ್ರತಿಯೊಂದು ಗೋರಿಯ ಮೇಲೂ ಹಾಕಿದ್ದರು. ಒಂದು ಕಡೆ ಕೆಲವು ಮೂಳೆಗಳನ್ನು ನೋಡಿದೆ, ಅವುಗಳು ಬಹಳ ದೊಡ್ಡದಾಗಿದ್ದವು , ಬಹುಶಃ ಕಾಲುಗಳದಿರಬೇಕು. ನಾನು ಅವುಗಳನ್ನು ಎತ್ತಿಕೊಂಡು ಮುಂದುವರೆದೆ.ನಂತರ ಕೆಲವು ಚಿಕ್ಕ ಮೂಳೆಗಳು, ಕೆಲವು ಕೈನ ಮೂಳೆಗಳು, ತಲೆ ಬುರುಡೆಗಳು ಸಿಕ್ಕವು. ನಾನು ಎಲ್ಲವನ್ನೂ ಸೇರಿಸಿ ಹಗ್ಗದಲ್ಲಿ ಕಟ್ಟಿ , ಮೂಳೆ ವ್ಯಾಪಾರಿ ಇರುವಲ್ಲಿಗೆ ನಡೆದೆ. ಅಲ್ಲಿ ತುಂಬಾ ಜನ ಇದ್ದರು,ನಿಂಬೆ ಮರದ ನೆರಳಿನಲ್ಲಿ ಕುಳಿದ ಮೂಳೆ ವ್ಯಾಪಾರಿಯನ್ನು , ಚಿಕ್ಕವರು, ದೊಡ್ಡವರು, ಗಂಡಸರು, ಹೆಂಗಸರು ಮತ್ತು ಮಕ್ಕಳು ಸುತ್ತುವರೆದಿದ್ದರು.

ನಾನು ಮೂಳೆಯವನ ಬಳಿ ಹೋದೆ. ಅವನು ಅಲ್ಲಿ ಮೂಳೆಗಳನ್ನು ತೂಗುವುದಕ್ಕೆಂದೇ ಒಂದು ದೊಡ್ಡ ತಕ್ಕಡಿಯನ್ನು ವ್ಯವಸ್ಥೆ ಮಾಡಿಟ್ಟುಕೊಂಡು ಇಟ್ಟಿದ್ದ. ಮೂಳೆಗಳನ್ನು ತೂಕ ಮಾಡಿ ಹಣವನ್ನು ಕೊಡುತ್ತಿದ್ದನು. ಹಣವು ಕೈಗೆ ಸಿಗುವಾಗ ಜನರ ಮುಖಗಳು ಸಂತೋಷದಿಂದ ಅರಳುತ್ತಿದ್ದವು. ದಾಮನೂ ಕೂಡ ಅವನ ಚಿಕ್ಕ ಚಿಕ್ಕ ಕಣ್ಣುಗಳಿಂದ ನೋಡಿಕೊಂಡು , ನಾಣ್ಯಗಳನ್ನ ಎಣಿಸುತ್ತಿದ್ದ. ಅವನ ಮುಖದಲ್ಲೂ ಸಂತೋಷವಿತ್ತು . ನಂತರ ನಾನೂ ಪಾಂಡ ಮೊದಲು ತಂದ ಮೂಳೆಗಳನ್ನೂ ತಕ್ಕಡಿಯ ಒಂದು ಕಡೆ ಹಾಕಿದೆವು. ಭಾರಕ್ಕೆ ತಕ್ಕಡಿಯು ಜಗ್ಗುತ್ತಿತ್ತು. ವ್ಯಾಪಾರಿಯು ಇನ್ನೊಂದು ಕಡೆ ತೂಕದ ಬಟ್ಟುಗಳನ್ನು ಸರಿದೂಗಿಸಲು ಹಾಕುತ್ತಲೇ ಇದ್ದ. ತಕ್ಕಡಿಯು ಸರಿಸಮವಾಯಿತು. ತೂಕವನ್ನು ನೋಡಿಕೊಂಡು ತನ್ನ ಝಣ ಝಣ ಎನ್ನುವ ಹಣದ ಚೀಲದಿಂದ "ಹನ್ನೆರಡಾಣೆ" ಅಂತ ಹೇಳಿ ಹಣವನ್ನು ಪಾಂಡಾನ ಕೈಗೆ ಕೊಟ್ಟ. ನಮಗೆ ತುಂಬಾ ಸಂತೋಷವಾಯಿತು.

ನಾ ಕಡೆಗೆ ತಂದ ಮೂಳೆಗಳನ್ನು ತಕ್ಕಡಿಗೆ ಹಾಕಿದ. ಮೂಳೆಗಳನ್ನು ಸೂಕ್ಷ್ಮವಾಗಿ ನೋಡಿ ನಂತರ ನನ್ನನ್ನು ದುರುಗುಟ್ಟಿ ನೋಡಿ "ಯಾವ ಮೂಳೆಗಳು ಇವು ?" ಎಂದ.
"ಏನು ಹಂಗಂದ್ರೆ? ಅವು ಮೂಳೆಗಳು. ಅಲ್ವಾ ?"
"ಮಗು, ನಮ್ಮನ್ನ ಜೈಲಿಗೆಕಳಿಸಬೇಕು ಅಂತ ಇದ್ದೀಯಾ?"
"ಆಂದ್ರೆ ?" ನಾನು ಆಶ್ಚರ್ಯದಿಂದ ಕೇಳಿದೆ
ಸುತ್ತುಮುತ್ತಲಿದ್ದ ಜನರು ನನ್ನನ್ನೂ ಮತ್ತು ವ್ಯಾಪಾರಿಯನ್ನು ಬೆರಗಿನಿಂದ ನೋಡತೊಡಗಿದರು. ವ್ಯಾಪಾರಿ ಏನು ಹೇಳಿದ ಅಂತ ನನಗೆ ಅರ್ಥ ಆಗಲಿಲ್ಲ.
"ಮಗು! ಇವು ಪ್ರಾಣಿಗಳ ಮೂಳೆಗಳಲ್ಲ ! ಇವು ಮನುಷ್ಯರದು! "
ಮನುಷ್ಯರ ಮೂಳೆಗಳು! ಕೆಲವರುಹೆದರಿದರು. ಕೆಲವರು ದೂರ ಸರಿದರು. ವ್ಯಾಪಾರಿ ಮತ್ತೆ ಹೇಳಿದ "ನೀನು ನಮ್ಮನ್ನ ಜೈಲಿಗೆ ಕಳಿಸಬೇಕು ಅಂತ ಇದ್ದೀಯಾ? ಈಗಲೇ ಇದನ್ನೆಲ್ಲಾ ಎತ್ತಿಕೋ.  ಎಲ್ಲಿ ಸಿಕ್ಕತೋ ಅಲ್ಲೇ ಹಾಕು. ಓಡು, ಓಡು! ಇಲ್ಲಾಂದ್ರೆ ಪೋಲೀಸಿನವರು ನಿನ್ನ ಹಿಡಿದುಕೊಂಡು ಹೋಗ್ತಾರೆ !"
ಮೂಳೆಯವನು ಈ ಮಾತನ್ನು ಹೇಳಿದಾಗ ನಾ ನಿಂತಲ್ಲೇ ಗಡಗಡ ನಡುಗಿದೆ. ನಾ ಕೂಡಲೇ ತಕ್ಕಡಿಯಿಂದ ಮೂಳೆಗಳನ್ನ ತೆಗೆದು, ಒಟ್ಟಿಗೆ ಸೇರಿಸಿ ಕಟ್ಟಿ ಸ್ಮಶಾನದ ಕಡೆಗೆ ಹೊತ್ತುಕೊಂಡು ಓಡಿದೆ. ಅಲ್ಲಲ್ಲಿ ಮೂಳೆಗಳನ್ನ ಹರಡಿ ಏದುಸಿರು ಬಿಡುತ್ತಾ ಹಿಂತಿರುಗಿದೆ. ನನಗೆ ಉಸಿರಾಡಲೂ ಕೂಡ ತುಂಬ ಕಷ್ಟವಾಗಿತ್ತು.

ನಾನು ಕಟ್ಟೆಯ ಬಳಿ ಇದ್ದ ಪಾಂಡನೆಡೆಗೆಹೋದೆ. ಅವನು ನನ್ನ ಪಾಲಿನ ನಾಲ್ಕಾಣೆ ಕಾಸುಗಳನ್ನು ನನ್ನ ಕೈಯಲ್ಲಿಟ್ಟ. ನನ್ನ ಕೈಯಲ್ಲಿದ್ದ ನಾಣ್ಯಗಳನ್ನುನೋಡಿ ನಾನು ಪುಳಕಿತನಾದೆ. ಮುಷ್ಟಿಯೊಳಗೆ ಕಾಸುಗಳನ್ನು ಬಿಗಿ ಹಿಡಿದುಕೊಂಡು ಮನೆಗೆ ಸಂತೋಷದಿಂದ ಜಿಗಿಯುತ್ತಾ ಹೋಗಿ ಅಮ್ಮನಿಗೆ ಕೊಟ್ಟೆ.
"ಎಲ್ಲಿಂದ ಸಿಕ್ತು ನಿಂಗೆಈ ದುಡ್ಡು ?" ನನ್ನ ಆಶ್ಚರ್ಯದಿಂದ ನೋಡುತ್ತಾ ಅಮ್ಮ ಕೇಳಿದಳು.
"ನಾನು ಸ್ವಲ್ಪ ಮೂಳೆಗಳನ್ನಮೂಳೆಯವನಿಗೆ ಮಾರಿದಾಗ ಸಿಕ್ತು "

"ಹಾಗಾದ್ರೆ ಇದನ್ನ ಬೇರೆಕಡೆ ಎತ್ತಿಡ್ತೀನಿ, ನಿನಗೆ ಬಜಾರಲ್ಲಿ ಏನಾದ್ರೂ ತಿನ್ನೋದಕ್ಕೆ ತಗೋಳೋಕೆ ಆಗುತ್ತೆ" ಆಮೇಲೆ ಹಣವನ್ನು ಮಡಕೆಗಳ ಮದ್ಯೆ ಇರುವ ಒಂದು ಚಿಕ್ಕ ಜಾಡಿಯಲಿ ಹಾಕಿದಳು. ನಾನು ಕುಣಿದುಕೊಂಡು ಕುಣಿದುಕೊಂಡು, ಮುಖದ ತುಂಬಾ ನಗು ಇಟ್ಟುಕೊಂಡು ಗೆಳೆಯರಿರುವ ಜಾಗಕ್ಕೆ ಹೋದೆ.

5 comments:

Vasudeva Sharma said...

ಚೆನ್ನಾಗಿದೆ. ಅನುವಾದ ಸೊಗಸಾಗಿ ಮೂಡಿಬಂದಿದೆ.

Vasudeva Sharma said...

ಚೆನ್ನಾಗಿದೆ. ಅನುವಾದ ಸೊಗಸಾಗಿ ಮೂಡಿಬಂದಿದೆ.

Vinod Kumar Bangalore said...

Vasudeva Sharma : ಧನ್ಯವಾದಗಳು ಸರ್ . ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆಯಿರಲಿ.

Prakash N Jingade said...

ಮೂಳೆಗಳ ಕತೆ ಹೊಸ ತರಹ ಇದೆ.... ಚನ್ನಾಗಿದೆ

Prakash N Jingade said...

ಮೂಳೆಗಳ ಕತೆ ಹೊಸ ತರಹ ಇದೆ.... ಚನ್ನಾಗಿದೆ