Wednesday, November 7, 2012

ಪ್ರೀತಿ ಮತ್ತು ಕರ್ತವ್ಯ

ಪ್ರೀತಿ ಮತ್ತು ಕರ್ತವ್ಯ 
============

ಒಂದು ಬೆಟ್ಟದ ತಪ್ಪಲಲ್ಲಿ
ಗಾಂಧಿ ವಿಶಾಂತಿಗೆಂತ ತಂಗಿದ್ದಾಗ ಅಕಸ್ಮಾತ್ ಪಡೆದ
ಅನಿರೀಕ್ಷಿತ ಉತ್ತರದಿಂದಾಗಿ ಅವರಿಗೆ
ಸಾಕ್ಷಾತ್ಕಾರ ವಾದ್ದನ್ನ 
ನನ್ನ ಅಪ್ಪ ಹೇಳಿದ್ದರು 

ಒಬ್ಬ ಹುಡುಗಿ, ಚಿಕ್ಕವಳು 
ಕಂಕುಳಲ್ಲಿ ಹುಷಾರಾಗಿ ಅಕ್ಕರೇoದ
ಒಂದು ಮಗುವನ್ನು ಎತ್ತಿಕೊಂಡು
ಹುಡುಗಾಟಿಕೆಗೆ ಬರಿಗಾಲಲ್ಲಿ ಲಂಗದ ನಿರಿ ಚಿಮ್ಮುತ್ತ
ಏದುಸಿರು ಬಿಡುತ್ತ
ಗುಡ್ಡ ಹತ್ತಿ ಬರುತ್ತಿದ್ದಾಳೆ, ಬಿಸಿಲು,
ನೋಡಕ್ಕೆ ಲಕ್ಷಣವಾಗಿದ್ದಾಳೆ,
ತೇಪೆ ಹಾಕಿದ ಲಂಗ ಉಟ್ಟಿದ್ದಾಳೆ
ಬರಿಕತ್ತಿನ ಮೇಲೆ ಬಿಡದಿರೊ ಜಡೇಲಿ ಹೂ ಮುಡಿದಿದಾಳೆ.

ಮರದ ನೆರಳಲ್ಲಿ ಕೂತು ನೋಡುತ್ತಿದ್ದ
ಗಾಂಧಿಗೆ ಕನಿಕರ ಉಕ್ಕಿ ಕೆಳಗಿಳಿದು ಹೋಗಿ
ಕೇಳುತ್ತಾರೆ:
" ಭಾರವೇನಮ್ಮ? "

ಹುಡುಗಿ ನಡೀತಾನೆ
ಒಂದು ಕಂಕುಳಿಂದ ಇನ್ನೊಂದಕ್ಕೆ ಅಕ್ಕರೇoದ,
ಹುಷಾರಾಗಿ, ಗೆಲುವಾಗಿ ಮಗೂನ್ನ ಬದಲಾಯಿಸಿ
ಹೇಳುತ್ತಾಳೆ :
" ಇವನು ನನ್ನ ತಮ್ಮ ."

**ಯು ಆರ್ ಅನಂತಮೂರ್ತಿ **

No comments: