Wednesday, November 26, 2025

“ಅವಳ ಕಾಲು ಸೋಲದಿರಲಿ” ಕವನ ಸಂಕಲನ - ಫಾತಿಮಾ ರಲಿಯಾ. Avala Kalu Soladirali - Poetry collection by Fathima Raliya Hejamady





 ಗಾಯದ ಮೇಲೆ ಕೈ ಇಟ್ಟರೆ

ಕವಿತೆ ರಚ್ಚೆ ಹಿಡಿಯುತ್ತಿತ್ತು
ಎತ್ತಿಕೋ ಎಂದು
ಥೇಟು ಮಗಳಂತೆ!

ʻರೊಟ್ಟಿಯಂಥಾ ಕವಿತೆʼಯ ಸಾಲುಗಳಿವು

ಮೂವತ್ತು ಕವನಗಳಿರುವ “ಅವಳ ಕಾಲು ಸೋಲದಿರಲಿ” ಕವನ ಸಂಕಲನವನ್ನು ಫಾತಿಮಾ ರಲಿಯಾ ತಮ್ಮದೇ ಪ್ರಕಾಶನ ಉಡುಗೊರೆ ಪ್ರಕಾಶನದ ಮೂಲಕ ಹೊರತಂದ್ದಿದ್ದಾರೆ.


ಬುದ್ಧನನ್ನರಸುತ್ತಾ ಕವಿತೆಯಲ್ಲಿ ಬರುವ
ʻʻನನಗೆ ಜ್ಞಾನದ ಹಂಬಲವಿಲ್ಲ
ಬುದ್ಧನೇ ಅಂದಿದ್ದಾನಲ್ಲಾ
ಅತಿ ಆಸೆ ಸಲ್ಲದೆಂದು”

“ಆವನ ದಕ್ಕಿಸಿಕೊಳ್ಳಬೇಕೆಂದಿದ್ದರೆ
ನಡಿಗೆ ನವಿಲಾಗಬೇಕು
ಅರ್ಥ ಅರಸುತ್ತಾ
ಅವನೊಳಂದಾಗಬೇಕು”

ʻಕಣ್ಣತೇವʼಕ್ಕೆಲ್ಲಾ ಅರ್ಥ ಹುಡುಕಬಾರದು

ಶಕುಂತಲೆ ಕವನದಲ್ಲಿ ಶಕುಂತಲೆಯನ್ನು ವಿಭಿನ್ನ ದೃಷ್ಟಿಕೋನದಿಂದ ಪ್ರಶ್ನಿಸಲಾಗಿದೆ

ಅಹಲ್ಯೆಯನ್ನು ಉದ್ದೇಶಿಸಿ ರಚಿಸಿದ ಕವನದಲ್ಲಿ
“ನಿನ್ನೆದೆಯ ಕಲ್ಲು ಮಾಡಿಕೊಂಡ
ವಿದ್ಯೆಯ ನನಗೂ ದಯಪಾಲಿಸು
ಒಂದಿಷ್ಟು ದಿನ ಬದುಕಬೇಕಿದೆ
ನನ್ನೆದೆಯ ಆಕ್ರೋಶ ನಿರಾಶೆಗಳನ್ನೆಲ್ಲಾ
ಮರೆತಂತೆ ನಟಿಸಿ “


“ಮಗುವಿಗೆ ತಾನು ಮಗುವೆಂದಾದರೂ ತಿಳಿದಿರಬಹುದೇ? ಎಂದು ಪ್ರಶ್ನಿಸಿ ಮುಗಿಸಿರುವ ಅನಿಕೇತನವೇ? ಎನ್ನುವ ಕವನವು ಕವಯತ್ರಿಯವರ ಯೋಚನಾಲಹರಿಯನ್ನು ಶ್ಲಾಘಿಸುವಂತೆ ಮಾಡುತ್ತದೆ.

ʻಬರೆಯದೇ ಉಳಿದ ಪದ್ಯʼ ದ
ಜೋರು ಮಳೆಗೆ ಸ್ವಚ್ಛವಾದ
ಸರಕಾರಿ ಶಾಲೆಯ ತಗಡು ಬೋರ್ಡಿನಷ್ಟೇ ಸತ್ಯ ಮೊದಲ ಪದ್ಯ

ʼಬುರ್ಖಾದೊಳಗಿದ್ದುಕೊಂಡೇ ಓದುತ್ತಾಳಂತೆʼ
ಉದ್ಘಾರ ಅಚ್ಚರಿಯೋ ಕುಹಕವೋ
ಮೆಚ್ಚುಗೆಯೋ ವ್ಯಂಗ್ಯವೋ
ಅರ್ಥವಾಗದಷ್ಟು ಬೋಳೇತನ
ಮೊದಲ ಪದ್ಯಕ್ಕಿತ್ತು
ಹಾಗೆಂದೇ ಅದು ಬರೆಯದೇ ಉಳಿದದ್ದು.

ಎನ್ನುವ ಸಾಲುಗಳು ಗಮನ ಸೆಳೆಯುತ್ತವೆ.


ಹೂ ಮಾರುವ ಹುಡುಗಿ, ಬುದ್ಧ ನಗುತ್ತಿಲ್ಲ, ಸಮಚಿತ್ತೆ ಊರ್ಮಿಳೆ, ಶಚೀತೀರ್ಥದ ಉಂಗುರದ ನೆರಳು, ಹೆಣ್ಣೇ ಸಾಕು ಈ ಮುಲಾಜು,
ಪುಟಾಣಿ ಹೆಜ್ಜೆ ಕಳೆದುಹೋದದ್ದೆಲ್ಲಿ? ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು, ಎಲ್ಲ ಮುಗಿದ ಮೇಲೆ, ರೊಟ್ಟಿಯಂಥಾ ಕವಿತೆ ….ನನಗಿಷ್ಟವಾದ ಕೆಲವು ಕವನಗಳು.

ಎದೆಯ ಸಂಕಟ ಬೆನ್ನೇರುತ್ತವೆ ಕವನದಲ್ಲಿ ಎಲ್ಲಾ ವಯಸ್ಸಿನ ಹೆಣ್ಣು ಜೀವಗಳ ನೋವ ಪ್ರಸ್ತುತಪಡಿಸುತ್ತಾ “ಬಹುಶಃ ಕೃಷ್ಣನಿಗೂ ಈಗೀಗ ಸಂಜ್ಞೆಗಳು ಅರ್ಥಾಗುವುದಿಲ್ಲವೇನೋ?” ಎಂದು ಕೇಳುತ್ತಾರೆ.

ʻʻಎಲೆ ಕಳಚುವ ಹೊತ್ತು” ಕವನದಲ್ಲಿ ಎದ್ದು ಕಾಣುವ “ದೇವರೇ ಅವಳ ಕಾಲು ಸೋಲದಿರಲಿ” ಎನ್ನುವ ವಾಕ್ಯ ಹೃದಯ ತಟ್ಟುತ್ತದೆ

ಫಾತಿಮಾ ಅವರ ಸಾಹಿತ್ಯ ಕೃಷಿ ನಿಲ್ಲದಿರಲಿ, ಸಾಗುತ್ತಲೇ ಇರಲಿ. ಶುಭವಾಗಲಿ

ಪುಸ್ತಕ್ಕಕ್ಕಾಗಿ ಧನ್ಯವಾದಗಳು ಕವಿಮಿತ್ರ ಯಂಶ ಬೇಂಗಿಲ.


Book ʼಚುಕ್ಕಿʼ ಕವನ ಸಂಕಲನ Chukki - Poetry Collection by Vijayalakshmi Satyamurthy

 


“ಕೊಂಬೆಯ ಮೇಲೆ

ಮಳೆಯಲ್ಲಿ ನೆನೆಯುತ್ತ
ಮುದುಡಿ ಕೂತಿದೆ ಹಕ್ಕಿಯೊಂದು
ಅನಿಸಿತು ನನಗೆ
ನನ್ನ ಕಷ್ಟ ಏನೇನೂ ಅಲ್ಲ ಎಂದು”

ಇದು ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ʼಚುಕ್ಕಿʼ ಕವನ ಸಂಕಲನದ ಉತ್ತಮ ಪದ್ಯಗಳಲ್ಲಿ ಒಂದು.

===
ಮಾಯಗಾರ ನೀನೆಂದು
ಗೊತ್ತಿರಲಿಲ್ಲ
ನೀನು ಬಂದ ಮೇಲೆ

ಕಣ್ಣು ನಿಶ್ಚಲ ಕೊಳವಾಗಿದೆ
ಹೃದಯ ಮೆಲುಕು ಹಾಕಲು
ಕಲಿತಿದೆ
===

'ಇದ್ದರೆ ಇರಬೇಕು
ಸೂರ್ಯ ಚಂದ್ರರಂತೆ

ಜಗದ ಮಾತಿಗೆ ಕಿವಿಗೊಡದೆ
ಮೌನವಾಗಿ ಬೆಳಕ ಚೆಲ್ಲುತ್ತಾ '

ಎನ್ನುವ ಚೆನ್ನುಡಿಯನ್ನೂ ಒಳಗೊಂಡಿದೆ

ಬಿದ್ದಿರುವ ವಸ್ತುಗಳ
ಜೋಡಿಸುವ
ಮನಸಿಲ್ಲ ಇಂದು ನನಗೆ

ಜೋಡಿಸಲು ಕಾದಿರುವೆ
ಮಾತಿಗೆ ಮಾತು ನಿನ್ನ ಜೊತೆಗೆ


ಸರಳವಾದ ಮೂರು ನಾಲ್ಕು ಸಾಲುಗಳ 84 ಹನಿಗವನಗಳಲ್ಲಿ ಭಾವೋತ್ಕರ್ಷ, ಮನದಿಂಗಿತ, ತತ್ವ ಎಲ್ಲವೂ ಅಡಗಿವೆ. ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುವುದು ಮತ್ತು ತನ್ನ ಪ್ರಿಯರಾದವರೊಡನೆ ಹೇಳುವ ಮಾತುಗಳು ಇಲ್ಲಿ ಕವನಗಳ ರೂಪ ಪಡೆದುಕೊಂಡಿವೆ.


ʼಚುಕ್ಕಿʼ ಪುಸ್ತಕ ಚೆನ್ನಾಗಿದೆ