“ಆ ಒಂದು ಹಸಿವಿನ ಸಮಯದಲ್ಲಿ ನಾನು ಪಟ್ಟ ಪಾಡು ಮಾತ್ರ ಮುಂದೆ ಯಾರಿಗೂ ಬಾರದಿರಲಿ. ಆಗಾ ಜಾತಿ, ಧರ್ಮ ಯಾವುದನ್ನೂ ನೋಡಲಿಲ್ಲ, ಇಲ್ಲಿ ಎಲ್ಲಾ ಜಾತಿಯವರು ಇದ್ದರು.”
“ನನಗೆ ನಾನು ಮಾಡಿದ ಕೆಲಸದಿಂದ ಯಾರಾದರೂ ಖುಷಿ ಪಟ್ಟು ಅವರ ಮುಖ ಊರಗಲವಾದರೆ, ನನಗೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ ಯಾವುದೂ ಇರಲಿಲ್ಲ”
“ಮುಂಬೈ ಜೀವನ”
ಶ್ರೀಮತಿ ವಸುಧಾ ಪ್ರಭು ಅವರ ಪುಸ್ತಕ “ಮುಂಬೈ ಜೀವನ”ವನ್ನು ಓದುತ್ತಿದ್ದರೆ ಅವರು ಒಂದು ಫ್ಲಾಸ್ಕಿನಲ್ಲಿ ಚಹಾ ತಂದು ಮುಂದಿಟ್ಟು ಅವರ ಅನುಭವ ಕಥನಗಳನ್ನು ಹೇಳುತ್ತಾ ಒಂದು ಕಪ್ಪಿನಲ್ಲಿ ಆಗಾಗ ಅರ್ಧ ಮಟ್ಟದವರೆಗು ತುಂಬಿಸಿ ಹಾಗೆಯೇ ಕುಡಿಯಲು ಕೊಡುತ್ತಿದ್ದಾರೆನ್ನುವಂತೆ ಭಾಸವಾಗುತ್ತದೆ. ಹೆಜಮಾಡಿಯಿಂದ ಅವರ ಮುಂಬಯಿಯವರೆಗಿನ ಜೀವನದ ಪಯಣದಲ್ಲಿ ಹಲವು ಏಳು ಬೀಳುಗಳನ್ನು ಕಂಡು ಒಬ್ಬ ಯಶಸ್ವಿ ವ್ಯಕ್ತಿಯ ಹಿಂದಿನ ಹೋರಾಟದ ಅನಾವರಣವೇ ಅವರು ಬರೆದ ಆತ್ಮಕಥೆ “ಮುಂಬೈ ಜೀವನ”. ಪುಸ್ತಕದ ಕಡೆಯ ಭಾಗಗಳಲ್ಲಿ ನಾವು ಚಹಾ ಬಹುತೇಕ ಕುಡಿದು ಮುಗಿಸುತ್ತಿರುವಾಗ ಅವರು ಈಗಾಗಲೇ ಅರವತ್ತೆಂಟು ವಸಂತಗಳನ್ನು ಪೋರೈಸಿರುವ ಅರಿವಾಗುತ್ತದೆ.
ಅವರ ಬರಹದ ಶೈಲಿಯು ಒಂದು ಅಧ್ಯಾಯದಿಂದ ಮತ್ತೊಂದು ಅಧ್ಯಾಯಕ್ಕೆ ಕುತೂಹಲದಿಂದ ಪುಸ್ತಕವನ್ನು ಓದಿಸಿಕೊಡು ಹೋಗುತ್ತದೆ. ಕವಯತ್ರಿ, ಲೇಖಕಿ, ವಾಗ್ಮಿ, ಪ್ರಸಾಧನ ತಜ್ಞೆ, ನಟಿ, ನಾಟಕ, ಸಿನಿಮಾ, ವರ-ವಧಾನ್ವೇಷಣೆ, ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡುವಿಕೆ, ಹೀಗೆ ಲೇಖಕಿಯರ ಹಲವಾರು ಮುಖಗಳ ಪರಿಚಯವಾಗುತ್ತದೆ.
ಈ ಕೃತಿಯನ್ನು ಸಾಧ್ಯವಾಗಿಸಲು ಕಾರಣೀಭೂತರಾದ ಕನ್ನಡ ಕಥಾಗುಚ್ಛ ಬಳಗದ ಉತ್ತೇಜನವು ಪ್ರಶಂಸನೀಯ.
ಶ್ರೀಮತಿ ವಸುಧಾ ಪ್ರಭುರವರಿಂದ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಮನದಾಳದ ಹಾರೈಕೆ.