ದೇವರು ಮಾಡುವುದು ಹೀಗೆಯೇ? ಅಥವಾ ಹೀಗೆ ಮಾಡುವುದೇ ದೇವರ ಉದ್ದೇಶವೇ? ದೇವರಿಂದ ಮಾಡಲ್ಪಟ್ಟಿದ್ದೂ ಈ ಮನುಷ್ಯ ಹೀಗೆಲ್ಲ ಆದದ್ದು ಏಕೆ? ಅಥವಾ ಹೀಗೆ ಮಾಡುವುದರಲ್ಲೇ ಕರ್ತೃವಿನ ಕರಾಮತ್ತು ಏನಾದರೂ ಇದೆಯೆ?
====
====
- ಡಾ. ಎಚ್. ಎನ್. ಮುರಳೀಧರ
ವಚನಕಾರರ ಪ್ರಕಾರ ಈ ಮನುಷ್ಯ, ಪ್ರಪಂಚ ಎಲ್ಲವೂ ದೇವರು ಮಾಡಿದ್ದು. ಆದರೆ ಈ ಮಾತು ಸಿದ್ಧಾಂತದ ಸ್ಥಾಪನೆಯಾಗಿ ಕಂಡುಬರುವುದಿಲ್ಲ. ಬದಲಿಗೆ ಸಮಸ್ಯೆಯ ಪ್ರಾರಂಭದ ಬಿಂದುವಾಗುತ್ತದೆ. ದೇವರು ಮಾಡುವುದು ಹೀಗೆಯೇ? ಅಥವಾ ಹೀಗೆ ಮಾಡುವುದೇ ದೇವರ ಉದ್ದೇಶವೇ? ದೇವರಿಂದ ಮಾಡಲ್ಪಟ್ಟಿದ್ದೂ ಈ ಮನುಷ್ಯ ಹೀಗೆಲ್ಲ ಆದದ್ದು ಏಕೆ? ಅಥವಾ ಹೀಗೆ ಮಾಡುವುದರಲ್ಲೇ ಕರ್ತೃವಿನ ಕರಾಮತ್ತು ಏನಾದರೂ ಇದೆಯೆ? ಈ ಮುಂದಿನದು ಕನ್ನಡದ ಆದ್ಯ ವಚನಕಾರ ಜೇಡರದಾಸಿಮಯ್ಯನ ಒಂದು ಪ್ರಸಿದ್ಧವಾದ ವಚನ.
ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ
ಶರೀರದೊಳಗೆ ಆತ್ಮನನ್ನು ಆರೂ ಕಾಣದಂತಿರಿಸಿದೆ
ಈ ಬೆರೆಸಿದ ಭೇದಕ್ಕೆ ಆನು
ಬೆರಗಾದೆ ಕಾಣಾ ರಾಮನಾಥ!
ಇಲ್ಲಿ ದಾಸಿಮಯ್ಯನು ತನ್ನ ಬೆರಗೊಂದನ್ನು ರಾಮನಾಥನ ಮುಂದೆ ನಿವೇದಿಸಿಕೊಂಡಿದ್ದಾನೆ. ಇದಕ್ಕೆ ಕಾರಣ ರಾಮನಾಥನು ಉಂಟುಮಾಡಿರುವ ಒಂದು ವಿಚಿತ್ರವಾದ ಭೇದ: ಇರುವುದನ್ನು, ಅದರ ಇರುವಿಕೆ ಗೊತ್ತಾಗದಂತೆ ಏರ್ಪಡಿಸಿರುವ ಒಂದು ಪರಿಸ್ಥಿತಿ. ಇದು ತಾನಾಗಿಯೇ ‘ಆದ’ದ್ದಲ್ಲ; ಬೇಕಾಗಿ ‘ಮಾಡಿರು’ವಂಥದು. (‘ಇರಿಸಿದೆ’ ಎಂಬ ಕ್ರಿಯಾಪದದ ಪುನರುಕ್ತಿಯನ್ನು ಗಮನಿಸಬೇಕು.) ಇದನ್ನು ಹೀಗೆ ಮಾಡಿರುವುದರಿಂದ ಹೀಗಿದೆ; ಅಲ್ಲದಿದ್ದರೆ ಹೀಗಿರುತ್ತಿರಲಿಲ್ಲ.
ಉರಿಯುವುದೇ ಸ್ವಭಾವವಾಗಿರುವ ಅಗ್ನಿಯನ್ನು ರಾಮನಾಥನು ಮರದೊಳಗೆ ಉರಿಯದಂತೆ ಇರಿಸಿದ್ದು ಎಂತಹ ಚಾತುರ್ಯ! ಅಂತೆಯೇ ತನ್ನ ಕಂಪಿನಿಂದಲೇ ಶುದ್ಧತೆಯನ್ನು ಸಾಬೀತುಪಡಿಸುವ ತುಪ್ಪವನ್ನು ನೊರೆಹಾಲಿನಲ್ಲಿ ಕಂಪಿಲ್ಲದಂತೆ ಮಾಡಿಟ್ಟಿದ್ದೂ ಕಡಮೆ ಕೌಶಲವೇನಲ್ಲ. ವಸ್ತುವಿನಲ್ಲಿ ವಸ್ತುತ್ವ ಗೋಚರಿಸದಂತೆ ಮಾಡುವ ಈ ಕ್ರಮ ಪವಾಡ ಮಾತ್ರವಲ್ಲ; ಕರ್ತೃವಿನ ‘ಕೈವಾಡ’ ಕೂಡ!
ಆತ್ಮವಿಲ್ಲದ ಶರೀರವನ್ನು ಯಾರು ತಾನೇ ಮಾನ್ಯ ಮಾಡುತ್ತಾರೆ? ಆಗ ಅದೊಂದು ಶವ ಮಾತ್ರ. ಆದರೆ ಇಲ್ಲಿ ರಾಮನಾಥನ ‘ಜಾಣ್ಮೆ’ಯನ್ನೊಂದಿಷ್ಟು ನೋಡಬೇಕು. ಅವನು ಶರೀರದಲ್ಲಿ ಆತ್ಮವನ್ನು ಇಟ್ಟದ್ದೇನೋ ಸರಿಯೆ; ಆದರೆ ಅದನ್ನು ಯಾರೂ ಕಾಣದಂತೆ ಮಾಡಿಬಿಟ್ಟ. ಆದ್ದರಿಂದ, ವಾಸ್ತವ ದೃಷ್ಟಿಯಿಂದ ನೋಡಿದರೆ, ಮನುಷ್ಯ ಲೆಕ್ಕದಲ್ಲಿ ಹದಿನಾರಾಣೆ ಶರೀರವೇ ಆಗಿಬಿಟ್ಟ. ಇದರ ಪರಿಣಾಮವೇ ಭೇದ: ನಾನು-ನೀನು, ಸಣ್ಣ-ದಪ್ಪ, ಎತ್ತರ-ಕುಳ್ಳ, ಕರಿಯ-ಬಿಳಿಯ, ಸುಂದರ-ಕುರೂಪಿ ಇತ್ಯಾದಿ ಇತ್ಯಾದಿ. ಈ ಭೇದದ ಪರಿಣಾಮವಾಗಿ ಸ್ವಾರ್ಥ; ಸ್ವಾರ್ಥದಿಂದ ಶೋಷಣೆ, ಹಿಂಸೆ, ದ್ವೇಷ ಇತ್ಯಾದಿ.
ಇಷ್ಟು ಮಾತ್ರವಲ್ಲ - ಶ್ರೀಮಂತನ ಶರೀರ-ಬಡವರ ಶರೀರ; ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವ ಶರೀರ-ಬೀದಿಯಲ್ಲಿ ಬಿದ್ದಿರುವ ಶರೀರ; ತುಳಿಯುವ ಶರೀರ-ತುಳಿಸಿಕೊಳ್ಳುವ ಶರೀರ.
ಜೊತೆಗೆ ಇಂದು ನಮ್ಮ ನಡುವೆ ಕೆಲವು ಶರೀರಗಳನ್ನು ಮಾತ್ರವೇ ‘ಆದರ್ಶ’ ಶರೀರಗಳೆಂದು ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿಯೇ ಲೆಕ್ಕವಿಲ್ಲದಷ್ಟು ಬಗೆಯ ಕ್ರೀಮುಗಳು, ಲೋಷನ್ನುಗಳು, ಶಾಂಪುಗಳು ತಯಾರಾಗುತ್ತಿವೆ. ಇಂದು ಮನುಷ್ಯನ ಕೂದಲು, ಚರ್ಮ, ಉಗುರುಗಳನ್ನು ಬಂಡವಾಳವಾಗಿಸಿಕೊಂಡು ಕೋಟಿ ಕೋಟಿ ಡಾಲರುಗಳು ಉದ್ದಿಮೆಗಳು ತಲೆಯೆತ್ತಿವೆ.
ಆದರೆ ಆತ್ಮದ ಜಗತ್ತು ಈ ರೀತಿಯದಲ್ಲ. ಶ್ರೀಮಂತನ ಆತ್ಮ-ಬಡವನ ಆತ್ಮ, ಸುಂದರಿಯ ಆತ್ಮ-ಕುರೂಪಿಯ ಆತ್ಮ ಎಂದೆಲ್ಲ ಅದನ್ನು ವಿಭಜಿಸಲು ಬರುವುದಿಲ್ಲ. ಅದು ಏಕತೆಯ ಸಾಮ್ರಾಜ್ಯ. ಭೇದ, ಸ್ವಾರ್ಥ, ಹಿಂಸೆಗಳಿಗೆ ಅಲ್ಲಿ ಎಡೆಯಿಲ್ಲ. ಅದು ಎಲ್ಲರನ್ನೂ, ಎಲ್ಲವನ್ನೂ ತೆಕ್ಕೆಯೊಳಗೆ ಸೆಳೆಯುವ ಪ್ರೇಮದ ಸಾಮ್ರಾಜ್ಯ.
ಈಗ, ಮನುಷ್ಯ ಆತ್ಮವಾಗಿ ಬದುಕುತ್ತಿದ್ದಾನೆಯೋ ಅಥವಾ ಶರೀರವಾಗಿ ಬದುಕುತ್ತಿದ್ದಾನೆಯೋ ಎಂಬುದನ್ನು ಅರಿಯಲು ಹೆಚ್ಚು ದೂರ ಹೋಗಬೇಕಾಗಿಲ್ಲ. ಅವನು ಬಾಳು ಸವೆಸುತ್ತಿರುವ ಜಗತ್ತಿನ ಲಕ್ಷಣವನ್ನು ಒಮ್ಮೆ ಪರಿಶೀಲಿಸಿದರಾಯಿತು. ಏಕತೆಯ ಸ್ವರ್ಗಕ್ಕೆ ಕಾರಣವಾಗುವ ಆತ್ಮದ ಅರಿವು (ಅಂತೆಯೇ ‘ಇರವು’) ಹಿಂಸೆ-ದ್ವೇಷಗಳ ನರಕವನ್ನು ಜಗತ್ತಿನಲ್ಲಿ ನಿರ್ವಿುಸಲಾರದಷ್ಟೆ!
ಈ ಪರಿಸ್ಥಿತಿಗೆ ಕಾರಣ ಯಾರು? ಯಾರು ಏನೇ ಹೇಳಲಿ, ದಾಸಿಮಯ್ಯನಿಗೇನೋ ರಾಮನಾಥನ ಮೇಲೆಯೇ ಅನುಮಾನ! ‘ಏನಯ್ಯಾ ಭಗವಂತ, ಈ ಶರೀರಿಗೆ ಆತ್ಮದ ಸುಳಿವನ್ನು ತೋರಗೊಡದೆ ಎಂತಹ ಮನುಷ್ಯನನ್ನು ನೀನು ಎಂತಹ ಸ್ಥಿತಿಗೆ ತಂದುಬಿಟ್ಟೆ!’ ಎಂದು ಹೇಳುತ್ತಿರುವಂತಿದೆ ಅವನು. ಅದೇನೇ ಇರಲಿ, ಕೆಲವರಾದರು ಮಹಾತ್ಮರು - ಮಹಾ ಆತ್ಮರು - ಇತಿಹಾಸದಲ್ಲಿ ಆಗಾಗ ಕಾಣಿಸಿಕೊಂಡು ಮನುಷ್ಯನ ಅಸ್ತಿತ್ವದ ಮತ್ತೊಂದು ಸಾಧ್ಯತೆಯನ್ನು ತೆರೆದು ತೋರಿದ್ದು, ಬದುಕಬಯಸುವಿರಾದರೆ ಇಗೋ ಇಲ್ಲಿದೆ ಗುರಿ ಹಾಗೂ ದಾರಿ ಎಂದು ಸಾರಿದ್ದು ನಮ್ಮ ಪಾಲಿಗೆ ಕಪ್ಪು ಮೋಡದ ಬೆಳ್ಳಿಯಂಚು. ‘ಇತರರಿಗಾಗಿ ಬದುಕುವವರೇ ನಿಜಕ್ಕೂ ಬದುಕುವವರು; ಉಳಿದವರು ಬದುಕಿರುವುದಕ್ಕಿಂತ ಹೆಚ್ಚಾಗಿ ಸತ್ತಂತೆಯೇ’ ಎಂದು ಸ್ವಾಮಿ ವಿವೇಕಾನಂದರು ನುಡಿದಾಗಲೂ ಅವರು ಮಾರ್ದನಿಸಿದ್ದು ಇದನ್ನೇ ಅಲ್ಲವೆ?
(ಲೇಖಕರು ಕನ್ನಡ ವಿದ್ವಾಂಸರು; ವಚನಸಾಹಿತ್ಯ, ದಾಸಸಾಹಿತ್ಯ, ಶ್ರೀ ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದ ಸಾಹಿತ್ಯದ ಕುರಿತು ವಿಶೇಷ ಅಧ್ಯಯನ ಮಾಡಿರುವವರು.)
ವಿಜಯವಾಣಿ