Wednesday, November 26, 2025

Book - ಫೈಜ್ಞಟ್ರಾಜ್ ಬರೆದಿರುವ “ಮಗಳಿಗೆ ಹೇಳಿದ ಕಥೆಗಳು" Magalige Helida Kathegalu by FaizNatraj

 “ಪರಿಸರದಲ್ಲಿ ಕೋಟ್ಯಾಂತರ ಜೀವರಾಶಿಗಳಿವೆ. ಅವುಗಳೆಲ್ಲಾ ಮನುಷ್ಯರ ಹಿಂದೆ ಬಿದ್ದಿಲ್ಲ. ಮನುಷ್ಯ ತನ್ನ ಸ್ವಾರ್ಥಕ್ಕೆ ಅವುಗಳ ಹಿಂದೆ ಬಿದ್ದಿದ್ದಾನೆ. “

ಇವು ಫೈಜ್ಞಟ್ರಾಜ್ ಬರೆದಿರುವ “ಮಗಳಿಗೆ ಹೇಳಿದ ಕಥೆಗಳು” ಮಕ್ಕಳ ಕಥಾಸಂಕಲನದ ʼಸೇಡು ಮರೆತ ಇರುವೆಗಳು!ʼ ಕಥೆಯ ಸಾಲುಗಳು.

ʼಮಗಳಿಗೆ ಹೇಳಿದ ಕಥೆಗಳುʼ ಇದರಲ್ಲಿ 18 ಕಥೆಗಳಿವೆ. ಹದಿನೆಂಟು ಕಥೆಗಳೂ ಮಕ್ಕಳಿಗಾಗಿಯೇ ಅಲ್ಲ ದೊಡ್ಡವರಿಗೂ ಒಂದಲ್ಲಾ ಒಂದು ಸಂದೇಶವನ್ನು ಕೊಡುತ್ತವೆ. ನಾವು ಯಾವಾಗಲೂ ನಮ್ಮ ಸುತ್ತಮುತ್ತಲಿನ ಅತ್ಯಮೂಲ್ಯವಾದ ಪರಿಸರವನ್ನು, ಪ್ರಕೃತಿಯನ್ನು ಲಘುವಾಗಿ ಪರಿಗಣಿಸುತ್ತಲೇ ಇರುತ್ತೇವೆ. ಇಲ್ಲಿ ಬಹುತೇಕ ಕಥೆಗಳು ಪರಿಸರ ಮತ್ತು ಪರಿಸರದ ಕಾಳಜಿಯ ಬಗ್ಗೆ ಬಗ್ಗೆ ಹೇಳುತ್ತವೆ. ಕೆಲವು ಕಥೆಗಳು ಕೊರೊನ ಕಾಲದಲ್ಲಿ ಹೊಳೆದಿರಬಹುದು, ಏಕೆಂದರೆ ಮನುಕುಲಕ್ಕೆ ಇರುವ ಮಿತಿ ಮೀರಿದ ಆಸೆಗೆ ಕಡಿವಾಣ ಹಾಕಲೆಂದೇ ಬಂದೆರಗಿದ ಕೊರೊನ ಸಾಂಕ್ರಾಮಿಕದ ಹಿನ್ನೆಲೆಯಿರುವ ಕಥೆಗಳಿವೆ.

ಫೈಜ್ನಟ್ರಾಟ್ ಅವರ ಕಥೆಗಳನ್ನು ಓದಿದಾಗ, ಅವರ ಕಥೆಗಳಲ್ಲಿ ಬರುವ ಕಾಡಿನ ಬಗ್ಗೆಯೇ ಆಗಲಿ, ಸುತ್ತಮುತ್ತಲಿನ ಪರಿಸರದ ಬಗ್ಗೆಯೇ ಆಗಲಿ ಕಣ್ಣಿಗೆ ಕಟ್ಟುವಂತೆ ವಿವರಿಸುವ ಪರಿ ಅವರು ತಮ್ಮ ಸುತ್ತ ಮುತ್ತಲಿನ ವಾತಾವರಣವನ್ನು, ಆಗುಓಗುಗಳನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ, ಪರಿಸರದ ಬಗ್ಗೆ ಎಷ್ಟೊಂದು ಕಾಳಜಿ ಇದೆ ಎನ್ನುವುದು ತಿಳಿಸುತ್ತದೆ. ಮಗಳಿಗೆ ಒಂದೊಂದು ಕಥೆಯನ್ನು ಹೇಳುತ್ತಾ ಹೇಳುತ್ತಾ ದೊಡ್ಡವರೂ ಯೋಚಿಸಲು ತೊಡಗುವಂತೆ ಮಾಡಿದ್ದಾರೆ.

ಈ ಕಥಾಸಂಕಲನವು ಮಕ್ಕಳ ಸಾಹಿತ್ಯ ಲೋಕಕ್ಕೆ ಒಂದು ಉತ್ತಮವಾದ ಸೇರ್ಪಡೆಯಾಗಿದೆ. ಕವಿ, ಸಾಹಿತಿ ಮತ್ತು ಉಪಾಧ್ಯಾಯರಾದ ಪ್ರಿಯ ಫೈಜ್ನಟ್ರಾಜ್ ರವರಿಗೆ ಶುಭಕಾಮನೆಗಳು

Book ಶ್ರೀಮತಿ ಪ್ರೇಮಾ ಭಟ್ ಮೇಡಂ ಅವರ ʼಅಮ್ಮನ ನುಡಿಗಳುʼ ಕವನ ಸಂಕಲನ Ammana NudigaLu by Prema Bhat

ಜಗಲಿಯಲ್ಲಿ ಕುಳಿತಿದ್ದ ಮಗು ಅಳುತ್ತಿತ್ತು
ಹತ್ತಿರ ಹೋದೆ, ಮಗು ಇನ್ನಷ್ಟು ಬಿಕ್ಕಿ ಬಿಕ್ಕಿ ಅತ್ತಿತು
ಅರ್ಥವಾಗಲಿಲ್ಲ ಮಗು ಏಕೆ ಅಳುತ್ತಿ ಎಂದು
ಸ್ವಲ್ಪ ಹೊತ್ತಿನಲ್ಲಿ ಅದು ಎದ್ದು ಒಳ ನಡೆಯಿತು
ಅಮ್ಮ ಹೊರಬಂದಳು ಅವಳ ಕೈಲಿ ರೊಟ್ಟಿ ಇತ್ತು
ಅಮ್ಮ ರೊಟ್ಟಿಯನ್ನು ಹಸಿದಿದ್ದ ನಾಯಿಗೆ ಹಾಕಿದಳು
ಮಗು ತಟ್ಟನೆ ಅಳು ನಿಲ್ಲಿಸಿತು
ಮಗುವಲ್ಲಿರುವ ಮನಸ್ಸು
ಬೆಳೆದ ಮೇಲೆ ಏಕೆ ಸುಟ್ಟು ಹೋಗುತ್ತದೆ?

ಇದು ಹಿರಿಯ ಸಾಹಿತಿಗಳಾದ ಶ್ರೀಮತಿ ಪ್ರೇಮಾ ಭಟ್ ಮೇಡಂ ಅವರ ʼಅಮ್ಮನ ನುಡಿಗಳುʼ ಕವನ ಸಂಕಲನದ ಒಂದು ಚೆಂದದ ಕವನ.

ಪ್ರಕಾಶಕರು: ಋತುಸೌರಭ ಫೌಂಡೇಶನ್.