Showing posts with label ಕಿರು ಕಥೆ. Show all posts
Showing posts with label ಕಿರು ಕಥೆ. Show all posts

Saturday, July 13, 2013

ನಾ ಲೆಕ್ಕದಲ್ಲಿ ತುಂಬಾ ವೀಕು

ನಾ ಲೆಕ್ಕದಲ್ಲಿ ತುಂಬಾ ವೀಕು 
==============

"ಶರೀಫಾ , ಐದ್ ಎಂಟ್ಲೀ ಎಷ್ಟು ?" ಅಂತಾ ಲೆಕ್ಕದ ಮೇಷ್ಟ್ರು ಕೇಳಿದ್ರು ನಾನು ನಲವತ್ತೆಂಟು ಅಂದೆ . ಹಿಡಿಯೋ ಕೈ ಅಂದ್ರು, ನಾ ಹಿಡಿದೆ "ಐದನೇ ಕ್ಲಾಸ್ ಓದ್ ತಾ ಇದ್ದೀಯಾ, ಇನ್ನೂ ಐದ್ ಒಂದ್ಲಾ ಐದ್ ಮಗ್ಗಿ ಬರಲ್ಲ ಬೊಡೆತಕ್ಕೆ " ಅಂದು ದಪ್ಪವಾದ ಬೆತ್ತ ತಗೊಂಡು ಎರಡು ಕೈಗುಳ್ ಗೆ ಹತ್ತು, ಹನ್ನೆರಡು ಏಟು ಕೊಟ್ರು , ಹತ್ತೋ ಹನ್ನೆರಡೋ ಗೊತ್ತಾಗ್ಲಿಲ್ಲ , ಯಾಕಂದ್ರೆ ನಾ ಲೆಕ್ಕದಲ್ಲಿ ತುಂಬಾ ವೀಕು. ಒಂದೆರಡು ಏಟುಗಳು ಎಡ ಕೈ ಮಣಿಕಟ್ಟಿಗೆ ಬಿದ್ದವು. ಒಂದು ರೀತಿ ಬಳೆ ಹಾಕಿದ ಹಾಗೆ ಕೆಂಪಗೆ ಗಾಯ ಆಗಿ ಸಣ್ಣದಾಗಿ ರಕ್ತ ಬರೋಕೆ ಶುರು ಆಯ್ತು. ಆಮೇಲೆ ಮೇಷ್ಟ್ರು 'ವೋಗ್ ಕೂತ್ಕೋ' ಅಂದ್ರು . ಕೂತವನು ಸುಮ್ಮನಿರಲಾರದೆ ನನ್ ಗೆಳೆಯ ವಿನಾಯಕನ ಬಲಗೈಲಿ ಕಟ್ಟಿರೋಂತ ದೇವಸ್ಥಾನದ ಕೆಂಪು ದಾರದ ರೀತಿ ಗಾಯದಿಂದ ಬರ್ತಿದ್ದ ರಕ್ತಾನ ಡಿಸೈನ್ ಡಿಸೈನ್ ಮಾಡಿ ಕೂತುಕೊಂಡೆ.

ಮನೆಗ್ ಬಂದಾಗ ಕೆಂಪು ಕೆಂಪಾಗಿದ್ದ ಕೈಗಳನ್ನ ನೋಡಿ ಅಮ್ಮಿ ಕೇಳಿದ್ರು ನಾ ನಡೆದ ವಿಷ್ಯ ಹೇಳ್ದೆ , ಅಮ್ಮಿ ನನ್ ಕಿವಿ ಹಿಂಡಿ ಎರಡು ಮೂರು ಸಾರಿ ತಿರುವಿದರು ಯಾವಾಗಲೂ ಇದೆ ನಿಂದು ಅಂತ , ಎರಡು ಸಲ ತಿರುವಿದರೋ ಮೂರು ಸಲ ತಿರುವಿದರೋ ಗೊತ್ತಿಲ್ಲ ಯಾಕಂದ್ರೆ ನಾ ಲೆಕ್ಕದಲ್ಲಿ ತುಂಬಾ ವೀಕು. ಆಮೇಲೆ ಅಬ್ಬು ಬಂದ್ರು. ಅಮ್ಮಿ ವರದಿ ಒಪ್ಪಿಸಿದ್ರು. "ನಿನ್ ಮಗ ಏನೇ ಇಷ್ಟೊಂದು ದಡ್ಡ, ಅಕ್ ಪಕ್ಕದ್ ಮಕ್ಳನ್ ನೋಡು ಎಷ್ಟು ಹುಷಾರಾಗಿದ್ದಾರೆ" ಅಂತ ಅಮ್ಮಿಗೆ ಹೇಳಿ , ನನ್ ಕುಂಡಿಗಳ ಮೇಲೆ ಕೈಯಿಂದ ನಾಲ್ಕೈದು ಬಾರಿಸಿದರು. ಇನ್ನೂ ನೋಯ್ತಾನೆ ಇದೆ . ನಾಲ್ಕು ಬಾರಿಸಿದ್ರೋ ಐದು ಬಾರಿಸಿದ್ರೋ ಗೊತ್ತಿಲ್ಲ ಯಾಕಂದ್ರೆ........ ನಾ ಲೆಕ್ಕದಲ್ಲಿ ತುಂಬಾ ವೀಕು