Showing posts with label ಕನ್ನಡ. Show all posts
Showing posts with label ಕನ್ನಡ. Show all posts

Thursday, June 29, 2023

Sparsha Shile Poetry

 



ಸ್ಪರ್ಶ ಶಿಲೆ

 

ಹಟಹಿಡಿದ ಅವಳ ತಪಕ್ಕೊಲಿದು

ಕೈ  ಹಿಡಿದ ಹೆಂಗರುಳಿನವನು

ಹೆಣ್ತನದ ಗಂಧದೊಳು ತನ್ನ ಬೆವರಿನ ಘಮ

ಬೆರೆಸಿ ಅಂಗಸಂಗದೊಳೊಂದಾದ

ಅರ್ಧನಾರೀಶ್ವರ

 

ಲಾವಣ್ಯ ಪ್ರಭಾ ಅವರ ಕವನಗಳ ಗುಚ್ಛ ಸ್ಪರ್ಶ ಶಿಲೆ ಕವನ ಸಂಕಲನ. ಇದರಲ್ಲಿ  ನಲವತ್ತು ಕವಿತೆಗಳಿವೆ, ಅವುಗಳಲ್ಲಿ  ಲಯರೂಪಿನಿಲ್ಲಲಾರೆವು ಇನ್ನಿಲ್ಲಿ ನಾವು ಬಹುಕಾಲ, ಸ್ಪರ್ಶ ಶಿಲೆ, ಬುದ್ಧ ಪೂರ್ಣಿಮೆಯಂದು, ಯುಗಾದಿ, ಮೋಹತೀರ, ಅಂತಃಪುರ ಗೀತೆ, ಬೆಳಗಿನ ತಾಯಿ ಕತ್ತಲೆ, ಶಿವರಾತ್ರಿ, ಚೆಲುವ, ಕಾವ್ಯವೆನ್ನುವುದು ಶುದ್ಧ ಗಂಡು.... ನನ್ನ ಗಮನ ಹೆಚ್ಚು ಸೆಳೆದ ಕವಿತೆಗಳು.

 

ಕವಯತ್ರಿ ಶಿವನನ್ನು ಬಣ್ಣಿಸುವ ರೀತಿ ಅನನ್ಯವಾಗಿದೆ. ಅದು ಲಯರೂಪಿ ಮತ್ತು ಶಿವರಾತ್ರಿ ಕವನದಲ್ಲಿ ಬಹಳ ಚೆನ್ನಾಗಿ ಮೂಡಿದೆ.

 

ಅಂದು ಕತ್ತಲೆಗೆ ಬಂದಂತೆ ಕಣ್ಣು

ಶಿವನೆದೆಯಲ್ಲಿ ದೀಪ ಅವನ ಹೆಣ್ಣು

 

ಮೇಲು ಕೋಟೆಯ ಚೆಲುವ ನಾರಾಯಣಸ್ವಾಮಿಯ ಮೋಹಿಸುವ ಹೊರಗಮ್ಮ ದೇವಿಯ ಬಗ್ಗೆ ಇರುವ ಕವನ ʼಚೆಲುವʼ ಮನಸೆಳೆಯುತ್ತದೆ  

   

“ಹಾಗೆಲ್ಲ ಮುಟ್ಟುವ ಹಾಗಿಲ್ಲ” ಎನ್ನುವಂತ ಸಾಲುಗಳನ್ನೊಳಗೊಂಡ ʼಬುದ್ಧ ಪೂರ್ಣಿಮೆಯಂದುʼ ಕವನವು ಯಶೋಮತಿಯ ತಳಮಳವ ನಮ್ಮೆದುರು ತೆರೆದಿಡುತ್ತದೆ.

 

ವಿವಿಧ ವಿಷಯಗಳ ಮೇಲೆ ಬರೆದಿರುವ ಕವನಗಳನ್ನು ಸ್ಪರ್ಶಶಿಲೆ ಕವನಸಂಕಲನವು ಒಳಗೊಂಡಿದೆ.

 

ಇವರ ಕವನಗಳ ಕೊನೆ ಹಂತದ ಸಾಲುಗಳ ತೀಕ್ಷ್ಣತೆಗೆ ಒಂದು ಉದಾಹರಣೆ ʼಅಂತಃಪುರ ಗೀತೆʼ ಕವನದಲ್ಲಿದೆ. ಅದರಲ್ಲಿಬಹು ದಿನಗಳ ನಂತರ ಹಿಂದುರಿಗಿದ ರಾಜನಿಗೆ ರಾಣಿಯು ಹೇಳುವ ಈ ಸಾಲುಗಳು ಮನಮುಟ್ಟುತವೆ.

 

“ಓಹ್! ಎದೆಗವಚ ಇನ್ನು ಯಾಕೆ?

ನಾನಿಲ್ಲವೇ?

ನಿಮ್ಮ ತುಂಟನಗು, ಆಸೆಗಣ್ಣು

ಅರ್ಥವಾಗುವುದೆನಗೆ

ಅದಕ್ಕೂ... ಮೊದಲು...

ನಿಮ್ಮ ರತ್ನಖಚಿತ “ಕಿರೀಟ”

ಕೊಂಚ.... ತೆಗೆದಿರಿಸಿ ದೂ..ರ

ನನ್ನ ದೊರೆ

ನಂತರ... ಸಗ್ಗ ಸೆರೆ”

 

ಬಹುತೇಕ ಕವಿಗಳು ಕವಿತೆ ಕಟ್ಟುವಾಗಿನ ಅನುಭವ ʼಕಾವ್ಯವೆನ್ನುವುದು ಶುದ್ಧ ಗಂಡುʼ ಕವನದಲ್ಲಿದೆ.

 

ಮತ್ತಷ್ಟು ಮಗದಷ್ಟು ಕವನಗಳು ಬರಲಿ ಎಂದು ಆಶಿಸುತ್ತಾ ಶುಭಕೋರುವೆ


Monday, July 11, 2016

ನಾ ಓದಿದ ಪುಸ್ತಕ - ಹೇಳಿ ಹೋಗು ಕಾರಣ - ರವಿ ಬೆಳಗೆರೆ

ನನಗೇಕಿಷ್ಟ ರವಿ ಬೆಳಗೆರೆ ? ಅವರು ಬರೆಯುವ ಶೈಲಿಯೇ ಹಾಗಿದೆ. ಅವರ ಕಥೆಯನ್ನು ಕಟ್ಟುವ ರೀತಿಯೇ ಹಾಗಿದೆ.

“ಒಂದು ಮುನಿಸಿಕೊಂಡಿರುವ ಕನಸು ಹುಡುಕಿಕೊಂಡು ಬಂದಿದೀನಿ. ನಿಮಗೇನಾದರೂ ಅದು ಇದಿರಾದರೆ, ನಾನಿಲ್ಲಿ ಕಾಯ್ತಿದೀನಿ ಅಂತ ತಿಳಿಸಿಬಿಡಿ. ಬೈದಿಬೈ – ಕನಸಿನ ಹೆಸರು ಪ್ರಾರ್ಥನಾ ?”

“ಹೇಳಿ ಹೋಗು ಕಾರಣ” ಓದಿದೆ. ಓದಿ ಮುಗಿಸಿದ ಮೇಲೆ ಬಾಯಾರಿದವನಿಗೆ ನೀರಿನ ಬದಲು ತುಸು ಶೇಂದಿ ಬೆರೆತ ಎಳೆನೀರು ಕುಡಿದಷ್ಟು ಸಂತೃಪ್ತಿ.

ಕಥೆಯು ಕೆಲವು ಕಡೆ ಕುತೂಹಲ ತಿರುವುಗಳನ್ನು ಪಡೆಯುತ್ತದೆ. ಕೆಲವೊಮ್ಮೆ ಕಥಾನಾಯಕ ಹಿಮವಂತ್ ಖಳನಾಯಕನಾಗಿ ಬದಲಾಗಿ ಹೋದನೇ ಎಂದು ಭಾಸವಾಗುತ್ತದೆ.  ಮನಸ್ಸಿದ್ದರೆ ಮಾರ್ಗ ಎನ್ನುವ ಸಂದೇಶವನ್ನು ಈ ಕಥೆ ಸಾರುತ್ತದೆ.

ಕೆಲವು ಕಡೆ ಸ್ವಗತದಲ್ಲಿ ಮತ್ತೆ ಮತ್ತೆ ಹಳೆಯ ಸಾಲುಗಳು ಪುನರಾವರ್ತನೆಯಾಗಿವೆ, ಬಹುಶಃ ಇದು ಧಾರಾವಾಹಿಯಾಗಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದರಿಂದ ಓದುಗರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶ ಇರಬಹುದು.

ಎಷ್ಟೇ ಹತ್ತಿರವಿದ್ದರೂ ದೈಹಿಕ ಸುಖ ಪಡೆಯದೇ ಒಬ್ಬ ವ್ಯಕ್ತಿ ತನ್ನವಳನ್ನು ಎಷ್ಟೊಂದು ಗಾಡವಾಗಿ ಪ್ರೀತಿಸಬಹುದು ಎನ್ನವ ಅನುಭವ ನಮ್ಮದಾಗುತ್ತದೆ. ಹಲವಾರು ಘಟನೆಗಳು, ಮಾತುಕತೆಗಳು ನಮ್ಮ ಜೀವನದಲ್ಲಿ ನಡೆಯುತ್ತಿರುತ್ತವೆ, ಅವುಗಳಲ್ಲಿ ಕೆಲವು ಅಕ್ಷರ ರೂಪದಲ್ಲಿ ಇಲ್ಲಿ ಮೂಡಿ ಬಂದಿವೆ. 

Thursday, June 2, 2016

ಅಬಚೂರಿನ ಪೋಸ್ಟಾಫೀಸು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ


“ ನೂರೆಂಟು ಅರ್ಥದಲ್ಲಿ ಜೂರಾರು ಜನ ಉಪಯೋಗಿಸಿರುವ ಮಾತಿನಲ್ಲಿ ನನಗೆ ಏನನ್ನಿಸುತ್ತಿದೆಯೋ ಅದನ್ನು ನಾನು ಹೇಳಲಾರೆ ಎಂದೆನ್ನಿಸಿತು“  ಇದು ತೇಜಸ್ವಿಯವರ ಕಥೆಗಳಲ್ಲಿ ಬರುವ ಪರಿಣಾಮಕಾರಿ ಮಾತುಗಳಲ್ಲೊಂದು.

ಕಥೆ ಬರೆಯಬೇಕೆ? ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥೆಗಳನ್ನು ಓದಿ. ಅಬಚೂರಿನ ಪೋಸ್ಟಾಫೀಸು , ಕಥಾಸಂಕಲನವನ್ನು ಓದಿದ ನಂತರ ನನಗೆ ಹೊಳೆದ ಅನಿಸಿಕೆ ಇದು,  
ತೇಜಸ್ವಿಯವರು ಸಣ್ಣಕಥೆಗಳು ಎಷ್ಟು ಅಚ್ಚುಕಟ್ಟಾಗಿವೆಯೆಂದರೆ ಅವುಗಳಲ್ಲಿ ಬರುವ ಪ್ರತಿಯೊಂದು ಪಾತ್ರವೂ, ಸನ್ನಿವೇ಼ಶಗಳು, ವಾತಾವರಣಗಳು ನೈಜತೆಯಿಂದ ಕೂಡಿರುತ್ತದೆ. ಎಂದೂ ಕೋಪಗೊಳ್ಳದಿದ್ದವನು ಕಡೆಗೆ ಕೋಪದಿಂದ ಕೆಂಡವಾಗುವ ಪೋಸ್ಟಮಾಸ್ತರ ಬೋಬಣ್ಣ ;  ಅವನತಿ ಕಥೆಯ ಸೂರಾಚಾರಿ, ಗೌರಿ , ನಮ್ಮ ನಿಮ್ಮ ನಡುವೆ ಕಾಣುವ ಕೆಲವು ಜನರಂತೆ ದೊಡ್ಡ ಹುಡುಗನಾಗಿದ್ದರೂ ಇನ್ನೂ ಬುದ್ದಿಯಲ್ಲಿ ಮಾಗದ ವಿಶ್ವನಾಥ ; ಕುಬಿ ಮತ್ತು ಇಯಾಲ ಕಥೆಯಲ್ಲಿ ಡಾಕ್ಟರ್ ಕುಬಿ, ಇಯಾಲ ಪಾತ್ರಗಳ ಜೊತೆಗೆ ತನ್ನದೇ ಮಹತ್ವವನ್ನು ಹೊಂದಿರುವ ರಸ್ತೆಯಲ್ಲಿರುವ ಬಂಡೆ. ತುಕ್ಕೋಜಿ ಕಥೆಯಲ್ಲಿ ಹೇಗೆ ಒಂದು ಹಳ್ಳಿ ನಾಗರೀಕತೆಯ ವಿಕಾಸದ ಹೆಸರಿನಲ್ಲಿ ತನ್ನತನವನ್ನು ಕಳೆದುಕೊಂಡು ಪಟ್ಟಣವಾಗಿ ಮಾರ್ಪಡುತ್ತದೆ ಎಂಬುವುದನ್ನು ಮನದಟ್ಟು ಮಾಡುತ್ತಾರೆ ಹಾಗೆಯೇ ಅವಿವಾಹಿತ ಟೈಲರ್ ತುಕ್ಕೋಜಿಯ, ವಿವಾಹದ ನಂತರ ಮತ್ತು ಮಗುವಾದ ನಂತರದ ಅನುಭವಗಳು, ಅವನ ಉನ್ನತಿ , ಅವನತಿ,ಅವನ ಒತ್ತಡ, ಆತಂಕ  ಕಣ್ಣಿಗೆ ಕಟ್ಟುವಂತಿದೆ

ಡೇರ್ ಡೆವಿಲ್ ಮುಸ್ತಫಾ ಕಧೆಯಲ್ಲಿ ಮುಸ್ತಫಾನ ಕೈಚಳಕ, ಸಾಹಸಗಳು , ರಾಮಾನುಜನ ಜೊತೆ ನಡೆಯುವ ತಮಾಷೆ ರಂಜಿಸುತ್ತವೆ. ಕಥೆಯ ಕೊನೆಯಲ್ಲಿ ಲೇಖಕರು ಹೇಳುವ “ಆದರೆ ನಾವೆಲ್ಲ ಆಗಲೇ ಯೌವನದ ಹುಮ್ಮಸ್ಸಿನಲ್ಲಿ ಆ ಗಡಿಗಳೆನ್ನೆಲ್ಲಾ ಮೀರುತ್ತಾ ಬಹುದೂರ ಬಂದಿದ್ದೆವು” ಎನ್ನುವ ಮಾತು ಓದುಗರನ್ನೂ ಪ್ರಬುದ್ಧರನ್ನಾಗಿ ಮಾಡುತ್ತದೆ

ತಬರನ ಕಥೆ ಸ್ವಾತ್ರಂತ್ರ್ಯೋತ್ತರದ ಆಡಳಿತ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.


ತ್ಯಕ್ತ ಕಥೆಯಲ್ಲಿ ಕಥಾನಾಯಕನಷ್ಟೇ ಮುಖ್ಯವಾಗುವ ಕಿಟ್ಟಿ ಎನ್ನುವ ಹುಡುಗನ ಚೇಷ್ಟೆ, ಭಾವನೆ, ತಳಮಳಗಳು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತವೆ.

Wednesday, November 18, 2015

“ನಿಮಗೆ ನನ್ನ ದ್ವೇಷ ದಕ್ಕುವುದಿಲ್ಲ” Letter from Paris

“ನಿಮಗೆ ನನ್ನ ದ್ವೇಷ ದಕ್ಕುವುದಿಲ್ಲ” ಎಂದು ಪ್ಯಾರಿಸ್ ನ ಆಂಟೋನ ಲೇಯಿರಿಸ್ ಕಳೆದ ವಾರದ ದಾಳಿಯಲ್ಲಿ ತನ್ನ ಹೆಂಡತಿಯನ್ನು ಕೊಂದ ಭಯೋತ್ಪಾದಕರನ್ನು ಉದ್ದೇಶಿಸಿ ಬರೆದಿದ್ದಾರೆ.

13ನೇ ನವಂಬರ್ 2015ರ ಶುಕ್ರವಾರ, ಆಂಟೋನ ಲೇಯಿರಿಸ್ನ ಪತ್ನಿಯು ಬಾಟಾಕ್ಲಾನ್ ರಂಗಮಂದಿರದಲ್ಲಿ ಸಂಗೀತ ಕಚೇರಿಯಲ್ಲ್ಲಿದ್ದಾಗ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡದಲ್ಲಿ ಇತರ 88 ಜನರ ಜೊತೆ ಬಲಿಯಾದರು.

“ಶುಕ್ರವಾರ ರಾತ್ರಿ ನೀವು ಒಂದು ಅಮೂಲ್ಯವಾದ ಜೀವವನ್ನು, ನನ್ನ ಜೀವನದ
ಪ್ರೀತಿಯನ್ನು, ನನ್ನ ಮಗನ ತಾಯಿಯನ್ನು ಕಳವು ಮಾಡಿದಿರಿ, ಆದರೆ ನಿಮಗೆ ನನ್ನಿಂದ ದ್ವೇಷ ದಕ್ಕಲಾರದು” ಎಂದು ಲೇಯಿರಿಸ್ರವರು ತಮ್ಮ ಫೇಸ್ ಬುಕ್ ನಲ್ಲಿ ಹೇಳಿದ್ದಾರೆ.  ತಮ್ಮ ಮನಮುಟ್ಟುವ ಮತ್ತು ಎದೆಗಾರಿಕೆಯ ನಿಲುಮೆಯಲ್ಲಿ , ಅವರು ತಮ್ಮ ಪತ್ನಿಯ ಬಗ್ಗೆ ಹೀಗೆ ಹೇಳುತ್ತಾರೆ: “ ಕಡೆಗೂ, ಹಲವು ರಾತ್ರಿ ಮತ್ತು ದಿನಗಳು ಕಾಯ್ದ ನಂತರ ಇಂದು ಬೆಳಿಗ್ಗೆ ನಾನವಳನ್ನ ನೋಡಿದೆ. ಅವಳು ಶುಕ್ರವಾರ ಸಂಜೆ ಹೊರಟಾಗ ಎಷ್ಟು ಸುಂದರವಾಗಿದ್ದಳೋ ಹಾಗೆಯೇ ಇದ್ದಳು, 12 ವರ್ಷಗಳ ಹಿಂದೆ ನಾ ಹುಚ್ಚನಂತೆ ಅವಳ ಪ್ರೀತಿಸತೊಡಗುವಾಗ ಎಷ್ಟು ಸುಂದರವಾಗಿದ್ದಳೋ ಹಾಗೆಯೇ ಇದ್ದಳು”

ಲೇಯಿರಿಸ್ ದಂಪತಿಗಳಿಗೆ 17 ತಿಂಗಳಿನ ಮಗನಿದ್ದಾನೆ.

“ನಾವಿಬ್ಬರೇ, ನನ್ನ ಮಗ ಮತ್ತು ನಾನು, ಆದರೆ ನಾವು ಜಗತ್ತಿನ ಎಲ್ಲಾ ಸೇನೆಗಳಿಗಿಂತ ಬಲಿಷ್ಠರು” ಎಂದು ಲೇಯಿರಿಸ್ ಹೇಳಿದ್ದಾರೆ. “ನೀವು ಯಾರು ಎಂದು ನನಗೆ ತಿಳಿದಿಲ್ಲ, ಆ ವಿಷಯ ನನಗೆ ಬೇಕಾಗಿಯೂ ಇಲ್ಲ. ದೇವರ ಪ್ರತಿರೂಪದಂತೆ ಇರುವ ನನ್ನವಳಿಗೆ ನೀವು ಮನಬಂದಂತೆ ಹಾರಿಸಿರುವ ಪ್ರತೀ ಗುಂಡು ದೇವರ ಹೃದಯಲ್ಲಿ ಗಾಯ ಮಾಡಿರುತ್ತದೆ.”

“ಇಲ್ಲ. ನಾನು ನಿಮಗೆ ನನ್ನ ದ್ವೇಷದ ಕೊಡುಗೆಯನ್ನು ಕೊಡಲಾರೆ. ನಿಜ ಹೇಳಬೇಕೆಂದರೆ ನಾನು ದುಃಖದಿಂದ ನುಚ್ಚುನೂರಾಗಿರುವೆ, ನಿಮಗೆ ಇದು ಸಂದ ಸಣ್ಣ ವಿಜಯವೆಂದು ನಾನು ಒಪ್ಪುತ್ತೇನೆ, ಆದರೆ ಇದು ಕೆಲವೇ ಸಮಯದ್ದು. ನನಗೆ ಗೊತ್ತು ನನ್ನವಳು ಪ್ರತೀದಿನ ನಮ್ಮೊಡನಿರುತ್ತಾಳೆ ಮತ್ತು ನೀವು ಮುಟ್ಟಲಾಗದ ನಮ್ಮೀ ಆತ್ಮಗಳ ಸ್ವರ್ಗದಲ್ಲಿ ನಾವಿರುತ್ತೇವೆ.

ಲೇಯಿರಿಸ್ ಭಯಬೀತರಾಗಲು ನಿರಾಕರಿಸುತ್ತಾ “ ನಿಮಗೆ ಹೆದರಬೇಕೆಂದು ನೀವು ಬಯಸುತ್ತೀರ. ನನ್ನ ಜೊತೆಯಲ್ಲಿರುವ ದೇಶವಾಸಿಗಳನ್ನು ಅನುಮಾನಾಸ್ಪದವಾಗಿ ನೋಡುವಂತೆ ಮಾಡಿ, ನಮ್ಮ ರಕ್ಷಣೆಗಾಗಿ ನಮ್ಮ ಸ್ವಾತಂತ್ರ್ಯವನ್ನು, ಸ್ವೇಚ್ಛೆಯನ್ನು ಬಲಿಕೊಡಬೇಕೆಂದು ಬಯಸುತ್ತಿದ್ದೀರ. ಇಲ್ಲ , ಈ ವಿಷಯದಲ್ಲಿ ನೀವು ಸೋತಿರುವಿರಿ. ನಾವು ನಾವಾಗಿಯೇ ಇರುತ್ತೇವೆ.”

ನನ್ನಲ್ಲಿ ನಿಮಗಾಗಿ ಸಮಯವಿಲ್ಲ ನಿದ್ದೆಯಿಂದ ಈಗಷ್ಟೇ ಏಳುತ್ತಿರುವ ನನ್ನ ಮಗ ಮೆಲ್ವಿನ್ನ ನ ಮೇಲೆ ಗಮನ ಹರಿಸಬೇಕಾಗಿದೆ “ನಾವು ಎಂದಿನಂತೆ ಆಟವಾಡುತ್ತೇವೆ. ಜೀವಮಾನದುದ್ದಕ್ಕೂ ನನ್ನ ಪುಟ್ಟ ಮಗ ನಿರ್ಭೀತಿಯಿಂದ ಸಂತೋಷವಾಗಿರುತ್ತಾನೆ, ಸ್ವತಂತ್ರವಾಗಿರುತ್ತಾನೆ. ಯಾಕೆಂದರೆ ಅವನ ದ್ವೇಷವೂ ನಿಮಗೆ ದಕ್ಕುವುದಿಲ್ಲ”

Thursday, May 21, 2015

ತಾಯಿ ಮಗ

ಯುದ್ದದ ಹುಚ್ಚಾಟಗಳು
ನಡೆಯುತ್ತಿತ್ತು
ಮನೆ ಮಠಗಳು
ನೆಲಸಮವಾಗಿದ್ದವು

ಅವನು ತನ್ನ ಕಳೆದುಕೊಂಡ
ತಾಯಿಯನ್ನು ಹುಡುಕುತ್ತಿದ್ದನು
ಕಾಲಿಲ್ಲದ ಅವಳು ಎಂದೋ ಗುಂಡೇಟು
ತಿಂದು ಸತ್ತ ಮಗನನ್ನು
ಹುಡುಕಿ ಹುಡುಕಿ ಹೈರಾಣಾಗಿದ್ದಳು

ಕಡೆಗೆ
ಯಾರೋ ಹೆತ್ತ ಮಗನು
ಯಾರನ್ನೋ ಹೆತ್ತ ತಾಯಿಗೆ
ಮಗನಾದನು

Sunday, April 12, 2015

ಮೃಗಾಲಯದ ಶುಲ್ಕ


18ನೇ ಶತಮಾನದಲ್ಲಿ ಇಂಗ್ಲೆಂಡಿನ ಮೃಗಾಲಯದ ಪ್ರವೇಶ ಶುಲ್ಕ ಮೂರುವರೆ ಪೆನ್ಸ್ ಆಗಿತ್ತು ಅಥವಾ ಶುಲ್ಕದ ಬದಲಿಗೆ ನೀವು ನಾಯಿ, ಬೆಕ್ಕುಗಳನ್ನು ಕೊಡಬಹುದಿತ್ತು. ಅವುಗಳನ್ನು ಮೃಗಾಲಯದವರು ಸಿಂಹಕ್ಕೆ ಆಹಾರವಾಗಿಸುತ್ತಿದ್ದರು. 

Wednesday, April 8, 2015

ನಾ ಒಲ್ಲೆ, ನಾ ಒಲ್ಲೆ

ಅಮೇರಿಕದ ಐಯೋವಾ ನಗರದ ನಿವಾಸಿ ಡೆರಿಕ್ ಎನ್ನುವವರಿಗೆ ತುಂಬಾ ಕೋಪ ಬಂದಿತ್ತು. ಪುರಭವನದ ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸಿದ್ದ ತನ್ನ ಕಾರಿಗೆ ಪಾರ್ಕಿಂಗ್ ಶುಲ್ಕ ಕೊಡಲು ಸುತಾರಾಂ ಇಷ್ಟವಿರಲಿಲ್ಲ, ಒಪ್ಪಲಿಲ್ಲ.


ಶುಲ್ಕ ಪಾವತಿಸುವ ಸ್ಥಳಕ್ಕೆ ಹೋಗಿ ಅಲ್ಲಿದ್ದವಳಿಗೆ ಹೇಳಿದ “ನಿಮ್ಮ ಪಾರ್ಕಿಂಗ್ ಅಟೆಂಡೆಂಟ್ ನನ್ನ ಕಾರಿನ ಡಿಕ್ಕಿಯಲ್ಲಿದ್ದಾನೆ, ನಿಮಗೆ ಅವನು ಜೀವಂತವಾಗಿ ಬೇಕಾ ಅಥವಾ ಹೆಣವಾಗಿನಾ ?”  ಅವಳು ಕೂಡಲೇ ಪೋಲೀಸರನ್ನು ಫೋನಾಯಿಸಿ ಕರೆದಳು. ಪೋಲೀಸರು ಅವನೊಡನೆ ಮಾತನಾಡಿ ಅವನ ದೂರ್ವಾಸ ಕೋಪವನ್ನು ಗಮನಿಸಿದ ನಂತರ , ಜೀವ ಬೆದರಿಕೆ ಮತ್ತು ದುರ್ನಡತೆಯ ಆರೋಪದ ಮೇಲೆ ಬಂಧಿಸಿದರು.

ನನಗೆ ನಮ್ಮ ನಾಡಿನಲ್ಲಿ ಹೈವೇಯಲ್ಲಿ Toll ಪಾವತಿಸಲು ಒಪ್ಪದ VIP ಗಳ ನೆನಪಾಯ್ತು   

Sunday, July 7, 2013

ಮಳೆ ಹನಿಗಳು 2

ಪ್ರಿಯೆ 
ನಿಮ್ಮೂರಿನಿಂದ 
ಕಳಿಸಿದ 
ಮುತ್ತುಗಳ 
ಸುರಿಮಳೆ 
ನಮ್ಮೂರಿನ 
ವರ್ಷಧಾರೆ 
ಎನ್ನ ಮೇಲೆ ಸುರಿಸಿದೆ

================

ಮಳೆಯಲ್ಲಿ 
ಏನೂ ಕಾಣಲಿಲ್ಲ 
ಹನಿ ಹನಿಯಲ್ಲೂ 
ಇದ್ದದ್ದು 
ಬರಿ ನೀನೆ ನೀನೇ
================

ಮಳೆಯ
ರೂಪದಲ್ಲಿಹ 
ನಿನ್ನ 
ಅಪ್ಪುಗೆಯಲ್ಲಿ 
ಎನ್ನ ಮರೆತಿಹೆನು 
ನೀರೆ

==================

ಮಳೆ ಹನಿಗಳು 1

ಅನುದಿನದ 
ಬೇಸರದ, ಬೈಗುಳಗಳ 
ಸುರಿಮಳೆಗಿಂತ 
ಇಂದಿನ ಈ 
ವರ್ಷಧಾರೆಯೇ 
ಚೆಂದ

=======================

ಎಲೇ 
ಗುಲಾಬಿಯೇ 
ನಿನ್ನ ಕಂಡು 
ಎನಗೆ ಈರ್ಷ್ಯೆ
ನಾನೂ ನಿನ್ನೊಡನೆ 
ಮಳೆಯಲ್ಲಿ 
ಮೀಯಲಾರದಾದೆನೆ

=========================

ಸಾಕು ಮಾಡು 
ಸ್ವಾತಿ ಮಳೆಯೇ 
ನನ್ನವಳ 
ಬಳಿ ಇರುವ 
ಮೂವತ್ತೆರಡು 
ಮುತ್ತುಗಳೇ ಸಾಕು 
ಅವಳ ಅಮೂಲ್ಯ ನಗುವಿಗೆ
=========================

ಲೋಕಕ್ಕೆ 
ಅಂಜಿಹೆನು 
ಇಲ್ಲದಿದ್ದರೆ 
ಮಳೆಯನ್ನೇ 
ಧರಿಸುತ್ತಿದ್ದೆನು
=========================


Saturday, July 6, 2013

ಸಂಬಂಧ

ಹೀಗೆಯೇ ಇರಲಿ 
ನಮ್ಮೀ ಸಂಬಂಧಗಳ 
ಎಳೆ 
ಬಿರುಗಾಳಿಯಲ್ಲೂ 
ಬುಡಮೇಲಾಗದ 
ಗರಿಕೆಯಂತೆ

ಸ್ವಯಂಕೃತ

ನನ್ನೀ 
ಬೇಸರಕೆ 
ನೀ ಅಲ್ಲ 
ಕಾರಣ 
ಇದೊಂದು 
ಸ್ವಯಂಕೃತ 
ಅಪರಾಧ

ಬೊಗಸೆ

ಕೈಗಳ ಮಧ್ಯೆ 
ಮುಖ 
ಹುದುಗಿಸಬೇಕೆನಿಸಿದೆ 
ಸಮಸ್ಯೆಗಳಿವೆ ಏನೇನೋ 
ಬೊಗಸೆಯ 
ಬಾವಿಯ ತಳದಲ್ಲಿ 
ನೆಮ್ಮದಿ 
ಸಿಗಬಹುದೇನೋ

ಕೆಲವರು

ಇಹರು 
ನಮ್ಮ 
ದಾರಿಯ 
ಮರೆಯದೆ 
ಕಾಯುವವರು 
ಕೆಲವರು. 
ನಮ್ಮನ್ನೇ 
ದಾರಿ ಮಾಡಿ 
ಮುಂದೆ ಸಾಗಿ 
ಮರೆಯುವವರು 
ಕೆಲವರು

Tuesday, June 18, 2013

ಬೆಳದಿಂಗಳೇ

ಮುಂಗುರುಳ 
ಮೋಡಗಳ
ನಡುವೆ ಇರುವ 
ಬೆಳದಿಂಗಳೇ 
ಸರಿಸೆ 
ತುಸು ತಲೆಯ 
ಮೇಲಿರುವ ಸೆರಗ 
ಈ ಮನದ 
ಅಮಾವಾಸ್ಯೆಯ 
ಕತ್ತಲು ತೊಲಗಲಿ

ಮನುಜ ಜನುಮ

ಇರುವೆಯಲ್ಲ 
ನೀ 
ಹುಳ ಹುಪ್ಪಟೆಯಲ್ಲ 
ನೀ
ತಳೆದ ಮೇಲೇ
ಮನುಜ ಜನುಮ 
ಏನಾದರೂ 
ಜಗಕೆ ಸಾಧಿಸಿ 
ತೋರಬೇಕಲ್ಲ 
ನೀ

Monday, June 17, 2013

ತಾತ್ಕಾಲಿಕ ಶಾಶ್ವತ

ಕೆಲವು ಭಾವನೆಗಳು ತಾತ್ಕಾಲಿಕ 

ಆದರೆ ನೆನಪುಗಳು ಶಾಶ್ವತ 


ಕೆಲವು ನಗು ತಾತ್ಕಾಲಿಕ 


ಆದರೆ ಅವು ತಂದ ಸಂತಸ ಶಾಶ್ವತ 


ಕೆಲವು ಸ್ಪರ್ಶಗಳು ತಾತ್ಕಾಲಿಕ 


ಆದರೆ ಅವುಗಳ ಅನುಭೂತಿ ಶಾಶ್ವತ 


ಕೆಲವು ಅನುಭವಗಳು ತಾತ್ಕಾಲಿಕ 


ಆದರೆ ಅದನನುಭವಿಸಿ ಬರೆದ ಕವನ ಶಾಶ್ವತ

Sunday, June 16, 2013

10

ಹನಿ ಹನಿ ಯಲ್ಲೂ ಕಾಣುತ್ತಿರುವೆ ನೀನು 
ಮತ್ತೆ ಮಳೆಯಲ್ಲಿ ನೆನೆಯುತಿರುವೆ ನಾನು

9

ನನ್ನ ಮನದಾಳದ ಮಾತು 
ಹೇಳಲು ಬರೆಯಲೇಬೇಕು 
ನನ್ನ ಮನದನ್ನೆಯ ಬಾಳು 
ಬೆಳಗಲು ನಾ ಬದುಕಲೇಬೇಕು